ಚಿಕ್ಕಮಗಳೂರು: ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು)- ಪ್ರತಿಯೊಬ್ಬರೂ ದೇಶಾಭಿಮಾನ ಬೆಳೆಸಿಕೊಂಡು ಸಂವಿಧಾನ ನೀಡಿದ ಹಕ್ಕುಗಳ ಜೊತೆಗೆ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುವುದು ಅತೀ ಮುಖ್ಯವಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಶ್ರೀ ರಂಭಾಪುರಿ ಪೀಠದ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಪ್ರತಿಷ್ಠಾನದ ಶ್ರೀ ವೀರಭದ್ರಸ್ವಾಮಿ ವಸತಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಜಗದ್ಗುರು ರುದ್ರಮುನೀಶ್ವರ ವಸತಿ ಪ್ರೌಢಶಾಲೆಯ ಆವರಣದಲ್ಲಿ ೭೫ನೇ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡುತ್ತಿದ್ದರು.
ಭಾರತ ಅತ್ಯಂತ ವಿಶಾಲವಾದ ದೇಶವಾಗಿದ್ದು ಹಲವಾರು ಧರ್ಮ, ಭಾಷೆ ಮತ್ತು ಜನಾಂಗ ಹೊಂದಿದೆ. ವಿವಿಧತೆಯಿದ್ದರೂ ಎಲ್ಲರೂ ಏಕತೆಯಿಂದ ಬಾಳುವುದು ಭಾರತೀಯ ಸಂಸ್ಕೃತಿಯಾಗಿದೆ. ಬೆಳೆಯುವ ಮಕ್ಕಳಲ್ಲಿ ಅದ್ಭುತ ಶಕ್ತಿಯಿದ್ದು ಅವರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರಾಭಿಮಾನ ಮೂಡಿಸುವ ಅವಶ್ಯಕತೆಯಿದೆ. ಶಿಕ್ಷಕರು ವಿಧ್ಯಾರ್ಥಿಗಳಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಅವಶ್ಯಕತೆಯಿದೆ ಎಂದರು.
ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಶ್ರೀ ಪೀಠದ ಆಡಳಿತಾಧಿಕಾರಿ ಎಸ್.ಬಿ.ಹಿರೇಮಠ, ಸಂಪರ್ಕಾಧಿಕಾರಿ ಪ್ರಭುದೇವ ಕಲ್ಮಠ ಸೇರಿದಂತೆ ಅನೇಕ ಗಣ್ಯರು ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕ ನಿಜಗುಣಿ ಕಟ್ಟೇಗೌಡ್ರ ಧ್ವಜಾರೋಹಣ ಪ್ರಕ್ರಿಯೆಗೆ ನೆರವು ನೀಡಿದರು. ಶಿಕ್ಷಕ ವೀರೇಶ ಕುಲಕರ್ಣಿ ನಿರೂಪಿಸಿದರು.
75th Republic Day Celebration at Jagadguru Rudramunieshwar Residential High School Premises