ಚಿಕ್ಕಮಗಳೂರು: : ಪ್ರಾಣಹಾನಿ ಸಂಭವಿಸುವ ಮುನ್ನ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಸರ್ಕಾರ ಹಾಗೂ ಅರಣ್ಯ ಇಲಾಖೆಯನ್ನು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್ ಇವರುಗಳು ರೈಲ್ವೇ ಬ್ಯಾರಿಕೇಡ್, ಆನೆ ಕಾರಿಡಾರ್ ನಿರ್ಮಿಸಿ, ಆನೆ ದಾಳಿಯನ್ನು ತಡೆಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದರು.
ಕಳೆದ ೩ ದಿನಗಳಿಂದ ೨೫ ರಿಂದ ೩೦ ಕಾಡಾನೆಗಳ ಹಿಂಡು ಅಂಬಳೆ ಹೋಬಳಿಯ ಕೆ.ಆರ್ ಪೇಟೆ, ಮತ್ತಿಕೆರೆ, ಮಾವಿನಕೆರೆ, ಬಾಣಾವರ, ಗಂಜಲಗೋಡು, ಹಳುವಳ್ಳಿ, ಹಾದಿಹಳ್ಳಿ ಗ್ರಾಮಗಳ ಸುತ್ತಮುತ್ತ ಒಡಾಡುತ್ತಿರುವುದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಠಿಯಾಗಿದೆ. ಮಾವಿನಕೆರೆ ಗ್ರಾಮದ ರೈತ ಹೆಚ್.ಕೆ ಕುಮಾರ್ ಎಂಬುವರ ಒಂದುವರೆ ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಕಾಫಿ ತೋಟಕ್ಕೆ ನುಗ್ಗಿ ಒಂದು ಸಾವಿರ ಕಾಫಿ ಗಿಡಗಳನ್ನು ಕಿತ್ತುಹಾಕಿ ನಾಶಪಡಿಸಿದ್ದಲ್ಲದೆ ತಂತಿಬೇಲಿ ಕಂಬಗಳನ್ನು ಕಿತ್ತು ಅಪಾರ ನಷ್ಟ ಉಂಟುಮಾಡಿವೆ ಎಂದು ತಿಳಿಸಿದರು.
ಹಳುವಳ್ಳಿ ಗ್ರಾಮದ ಇಂದ್ರೇಶ್, ಮೋಹನ್ ಗೌಡ, ಸಂತೋಷ್, ಎಂಬುವವರಿಗೆ ಸೇರಿದ ೩ ಭತ್ತದ ಬಣವೆಗಳನ್ನು ಸಂಪೂರ್ಣವಾಗಿ ತಿಂದು, ಸುಮಾರು ೪೦ ಕ್ವಿಂಟಾಲ್ ಭತ್ತದ ಜೊತೆಗೆ ದನಗಳ ಮೇವಿಗೆ ಬಳಸಬೇಕಾಗಿದ್ದ ಹುಲ್ಲು ಖಾಲಿಯಾಗಿದ್ದು, ಒಂದು ವರ್ಷದ ರೈತರ ಶ್ರಮ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂ ನಷ್ಟ ಸಂಭವಿಸಿದೆ ಎಂದು ತಿಳಿಸಿದರು.
ಮಳೆ ಇಲ್ಲದೆ ಬರಗಾಲದಲ್ಲಿ ಅಲ್ಪಸ್ವಲ್ಪ ಬೆಳೆದಿದ್ದ ಭತ್ತ ಮತ್ತು ಮೇವನ್ನು ಕಳೆದುಕೊಂಡಿರುವ ರೈತರು ಕಂಗಾಲಾಗಿದ್ದು ಕೂಡಲೇ ಅರಣ್ಯ ಇಲಾಖೆ ಈ ಸಂಬಂಧಪಟ್ಟ ರೈತರಿಗೆ ಮಾರುಕಟ್ಟೆ ದರದಂತೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಕಾಡಾನೆಗಳ ಹಾವಳಿಯಿಂದಾಗಿ ರಾತ್ರಿಹೊತ್ತು ಮನೆಗಳಿಗೆ ನುಗ್ಗಿ ಹಾನಿ ಮಾಡುವ ಅಪಾಯವಿದ್ದು, ಗ್ರಾಮಸ್ಥರು ನಿದ್ದೆಯಿಲ್ಲದೆ ಭಯದಿಂದ ಕಾಲ ಕಳೆಯುವಂತಾಗಿದೆ. ಇಷ್ಟೆಲ್ಲಾ ಇದ್ದರೂ ಅರಣ್ಯ ಇಲಾಖೆ ಸಿಬ್ಬಂದಿ ಕಾಟಾಚಾರಕ್ಕೆಂಬಂತೆ ರೈತರ ಹಾನಿ ಪ್ರದೇಶಕ್ಕೆ ಭೇಟಿನೀಡಿ ಸ್ಥಳ ಪರಿಶೀಲನೆ ಮಾಡಿ ಕೈತೊಳೆದುಕೊಂಡಿದ್ದಾರೆಂದು ಆರೋಪಿಸಿದರು.
ಈ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾಗಲೀ ಕಾರ್ಯದರ್ಶಿಯಾಗಲೀ ಕ್ರಮ ವಹಿಸುತ್ತಿಲ್ಲ. ಗ್ರಾ.ಪಂ ಆಡಳಿತ ನಿಷ್ಕ್ರಿಯಗೊಂಡಿದೆ ಎಂದು ದೂರಿದ ಅವರು ತಕ್ಷಣ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆನೆಗಳನ್ನು ಸ್ಥಳಾಂತರಿಸದಿದ್ದರೆ ಇಲಾಖೆ ಎದುರು ಪ್ರತಿಭಟನಾ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಎಂ.ಬಿ ಚಂದ್ರಶೇಖರ್, ನಾರಾಯಣ್ ರಾಜ್ ಅರಸ್ ಇದ್ದರು.
Karnataka State Farmers Union District President Gurushanthappa press conference