ಚಿಕ್ಕಮಗಳೂರು: ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಅಧಿಕಾರಿಗಳು ಸರಿಯಾಗಿ ಅರ್ಥೈಸಿಕೊಂಡು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಬೇಕೆಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಕರೆ ನೀಡಿದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ, ಬೆಂಗಳೂರು, ಕಂದಾಯ ಇಲಾಖೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಚಿಕ್ಕಮಗಳೂರು ವತಿಯಿಂದ ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಇಂದು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗ್ಗೆ ಕಂದಾಯ, ಮುಜರಾಯಿ, ಅರಣ್ಯ, ನಗರ ಸ್ಥಳೀಯ ಸಂಸ್ಥೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳಿಗಾಗಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಕಾಯ್ದೆ ನಿಯಮಗಳು ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಅನುಷ್ಠಾನ ಮಾಡುವ ಅಧಿಕಾರಿಗಳು ಕಾಯ್ದೆಯ ಉದ್ದೇಶ ಹಾಗೂ ಕಾಯ್ದೆಗಳ ಬಗ್ಗೆ ಪೂರ್ಣ ಅರಿವು ಹೊಂದಿರಬೇಕು ಎಂದು ತಿಳಿಸಿದರು.
ಸರ್ಕಾರಿ ಸ್ಥಳೀಯ ಸಂಸ್ಥೆಗಳು, ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿ, ವಕ್ಫ್ ಸರ್ಕಾರದ ಒಡೆತನದಲ್ಲಿರುವ ಅಥವಾ ನಿಯಂತ್ರಣದಲ್ಲಿರುವ ಭೂಮಿಯನ್ನು ಕಬಳಿಸಲು ಮಾಡುವ ಪ್ರಯತ್ನಗಳನ್ನು ತಡೆಗಟ್ಟುವ ಸಲುವಾಗಿ ಈ ಭೂ ಕಬಳಿಕೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಕಾಯ್ದೆ ಅನುಷ್ಠಾನ ಮಾಡುವಾಗ ಅಧಿಕಾರಿಗಳು ಬಹಳಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಸಮಸ್ಯೆಗಳಿಗೆ ಹೆದರದೆ ಭೂ ಕಬಳಿಕೆ ಮಾಡಿದವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ದಾಖಲಿಸಬೇಕು, ಸೂಕ್ತ ದಾಖಲೆ, ಸಾಕ್ಷ್ಯಗಳನ್ನು ಒದಗಿಸುವುದರಿಂದ ಪ್ರಕರಣಗಳು ಬಹುಬೇಗ ಇತ್ಯರ್ಥವಾಗಿ ಸರ್ಕಾರದ ಆಸ್ತಿ ಸಂರಕ್ಷಣೆಯಾಗುತ್ತದೆ ಎಂದರು.
ಭೂ ಕಬಳಿಕೆ ನಿಷೇಧ ಅಧಿನಿಯಮದಡಿ ಸರ್ಕಾರಿ ಆಸ್ತಿಯನ್ನು ಅಧಿಕಾರಿಗಳು ಸರ್ವೆ ಮಾಡಿ ಪರಿಮಿತಿಯನ್ನು ಗುರುತು ಮಾಡುವುದರಿಂದ ಅರಣ್ಯ ಇಲಾಖೆ, ತಾಲ್ಲೂಕು ಆಡಳಿತ, ನಗರ ಸ್ಥಳೀಯ ಸಂಸ್ಥೆಗಳು, ಧಾರ್ಮಿಕ ದತ್ತಿ ಇಲಾಖೆಯು ತಮ್ಮ ವ್ಯಾಪ್ತಿಗೊಳಪಡುವ ಜಮೀನು ಒತ್ತುವರಿಯಾಗಿರುವುದನ್ನು ತಿಳಿಯಬಹುದು ಎಂದರಲ್ಲದೆ ಭೂ ಕಬಳಿಕೆದಾರರು, ಕಾನೂನು ಉಲ್ಲಂಘಿಸಿ ಭೂಮಿಯನ್ನು ಅಕ್ರಮವಾಗಿ ಬಳಕೆ ಮಾಡುವುದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಪ್ರತಿಕೂಲ ಪರಿಣಾಮ ಉಂಟಾಗುವುದರಿಂದ ಭೂ ಕಬಳಿಕೆ ಮಾಡುವವರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು ಎಂದು ಹೇಳಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶುಭಗೌಡರ್ ಮಾತನಾಡಿ ಸರ್ಕಾರ ರೂಪಿಸಿರುವ ಭೂ ಕಬಳಿಕೆ ನಿಷೇಧ ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಬೇಕಾದರೆ ಕಾಯ್ದೆಯಲ್ಲಿರುವ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ತಮ್ಮ ಇಲಾಖೆಗಳಿಗೆ ವಿವಿಧ ಉದ್ದೇಶಗಳಿಗೆ ಮಂಜೂರಾಗಿರುವ ಭೂಮಿ ಒತ್ತುವರಿಯಾಗಿದ್ದರೆ ಅಧಿಕಾರಿಗಳು ಕಾನೂನಿನಡಿಯಲ್ಲಿ ಕ್ರಮಕೈಗೊಂಡರೆ ಭೂ ಕಬಳಿಕೆಯನ್ನು ತಡೆಗಟ್ಟಬಹುದು ಎಂದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲೆ ಭೌಗೋಳಿಕವಾಗಿ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ೩.೦೦ ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹೊಂದಿದ್ದು, ರೈತರು ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ, ೨.೦೦ ಲಕ್ಷ ಹೆಕ್ಟೇರ್ ಬೇರೆ ಬೇರೆ ರೀತಿಯ ಸರ್ಕಾರ ಭೂಮಿ ಇದೆ. ಕಳೆದ ಏಳು ತಿಂಗಳಲ್ಲಿ ಹಲವಾರು ಭೂ ಕಬಳಿಕೆ ಪ್ರಕರಣಗಳನ್ನು ದಾಖಲಾಗಿವೆ. ಮುಖ್ಯವಾಗಿ ಕಡೂರು ಹಾಗೂ ಮೂಡಿಗೆರೆಯಲ್ಲಿ ೬,೫೦೦ ಎಕರೆಯಷ್ಟು ಭೂಮಿಯನ್ನು ಅನಧೀಕೃತವಾಗಿ ಮಂಜೂರು ಮಾಡಿರುವುದು ತನಿಖೆಯಿಂದ ಕಂಡು ಬಂದಿದೆ. ಬೇರೆ ಬೇರೆ ಇಲಾಖೆಗಳಿಗೆ ಮಂಜೂರಾಗಿರುವ ಜಮೀನುಗಳು ಇಂಡೀಕರಣವೇ ಆಗಿರುವುದಿಲ್ಲ. ಕಂದಾಯ ಇಲಾಖೆ ಮಾತೃ ಇಲಾಖೆಯಾಗಿದ್ದರೂ ಹಲವಾರು ದಾಖಲೆಗಳಲ್ಲಿ ಶೇಕಡ ೨೭ ರಷ್ಟು ಅರಣ್ಯ ಭೂಮಿಯಾಗಿರುತ್ತದೆ ಎಂದರು.
ಅಧಿಕಾರಿಗಳು ತಮ್ಮ ಇಲಾಖೆಗೆ ಮಂಜೂರಾಗಿರುವ ಭೂಮಿ ಆರ್ಟಿಸಿಯಲ್ಲಿ ಇಂಡೀಕರಣವಾಗಿ ಒತ್ತುವರಿಯಾಗಿದ್ದರೆ ಅದಕ್ಕೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದರು.
ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ೨೦೧೧ ಮತ್ತು ತಿದ್ದುಪಡಿ ಕಾಯ್ದೆ ಕುರಿತು, ಭೂ ದಾಖಲೆಗಳ ಉಪನಿರ್ದೇಶಕ ಲೋಹೀತ್ ಮೋಜಿಣಿ ಮತ್ತು ನಿಯಮಗಳು, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್. ಪಾಲಯ್ಯ, ಕರ್ನಾಟಕ ಭೂ ಕಂದಾಯ ಅಧಿನಿಯಮ ೧೯೬೪ರ ಕಲಂ ೧೯೨(ಎ) ಕುರಿತು ಜಿಲ್ಲಾ ನಗರಾಭಿವೃದ್ಧಿಕೋಶದ ಪ್ರಥಮ ದರ್ಜೆ ಸಹಾಯಕ ಶಿವಪ್ರಸಾದ್ ಭಟ್, ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆಗಳು, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಸ್. ಸೋಮ ಅವರು, ಕೆರೆ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆ ಕುರಿತು, ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ. ಅಣ್ಣಯ್ಯ, ಅರಣ್ಯ ಇಲಾಖೆಯ ಆಸ್ತಿಗಳ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆ ಕುರಿತು ಹಾಗೂ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ವಿಲೇಖನಾಧಿಕಾರಿಗಳಾದ ಹೆಚ್.ಕೆ. ನವೀನ್ ಅವರು, ಮುಜರಾಯಿ ಇಲಾಖೆ ಮತ್ತು ವಕ್ಫ ಆಸ್ತಿಗಳ ಒತ್ತುವರಿ ಮತ್ತು ತೆರವುಗೊಳಿಸಲು ಇರುವ ಕಾನೂನು ಪ್ರಕ್ರಿಯೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ಕರ್ನಾಟಕ ಭೂ ಕಬಳಿಕೆ ವಿಶೇಷ ನ್ಯಾಯಾಲಯದ ನ್ಯಾಯಿಕ ಸದಸ್ಯ ಪಾಟೀಲ ನಾಗಲಿಂಗನಗೌಡ, ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಕೆ.ಹೆಚ್. ಅಶ್ವಥ ನಾರಾಯಣಗೌಡ ಹಾಗೂ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಉಪಸ್ಥಿತರಿದ್ದರು.
Karnataka Land Grab Prohibition Act Workshop