ಜಯಪುರ: ಇಲ್ಲಿನ ಗ್ರಾಮ ಪಂಚಾಯತಿ ಅವೈಜ್ಞಾನಿಕವಾಗಿ ಮನೆ ಕಂದಾಯ, ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದೆ ಎಂದು ಆರೋಪಿಸಿ ವರ್ತಕರ ಸಂಘ ಶನಿವಾರ ಕರೆ ನೀಡಿದ್ದ ಜಯಪುರ ಬಂದ್ಗೆ ಸ್ಪಂದನ ದೊರೆಯಿತು.
ವರ್ತಕರು ಸ್ವಯಂಪ್ರೇರಿತರಾಗಿ ಅಂಗಡಿ ಬಂದ್ ಮಾಡಿದ್ದರು. ಶೃಂಗೇರಿ ವೃತ್ತದಲ್ಲಿ ಸಭೆ ಸೇರಿ ಮಾನವ ಸರಪಳಿ ನಿರ್ಮಿಸಿ, ಕೆಲ ಹೊತ್ತು ರಸ್ತೆ ತಡೆ ನಡೆಸಿ ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಕಾರರನ್ನು ಉದ್ದೇಶಿ ಮಾತನಾಡಿದ ವರ್ತಕರ ಸಂಘದ ಗೌರವ ಅಧ್ಯಕ್ಷ ಎಚ್.ಎಂ.ಸತೀಶ್, ‘ಗ್ರಾಮ ಪಂಚಾಯಿತಿ ಯಾವುದೇ ಚರ್ಚೆ ನಡೆಸದೆ ಏಕಾಎಕಿ ಕಂದಾಯವನ್ನು ಏರಿಕೆ ಮಾಡಿದೆ. ತಾಲ್ಲೂಕಿನ ಯಾವುದೇ ಗ್ರಾಮ ಪಂಚಾಯತಿಯಲ್ಲೂ ಕಂದಾಯ ದರ ಏರಿಕೆ ಮಾಡಿಲ್ಲ. ಆದರೆ ಇಲ್ಲಿ ಮಾತ್ರ ತೆರಿಗೆ ಏರಿಕೆ ಮಾಡಿದ್ದು ಏಕೆ’ ಎಂದು ಪ್ರಶ್ನಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ ಕೃಷ್ಣ ಮಾತನಾಡಿ, ಮುಂದಿನ ವಾರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಶಾಸಕ ಟಿ.ಡಿ.ರಾಜೇಗೌಡ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಗ್ರಾಮ ಪಂಚಾಯಿತಿಯವರು ವರ್ತಕರ ಜೊತೆ ಚರ್ಚಿಸಿ ದರ ನಿಗದಿಪಡಿಸಬೇಕಾಗಿತ್ತು. ಇದು ಅವೈಜ್ಞಾನಿಕ ತೆರಿಗೆಯಾಗಿದ್ದು, ಈಗಾಗಲೇ ಜಿಲ್ಲಾ ಪಂಚಾಯಿತಿ ಸಿಒಇ ಜೊತೆ ಚರ್ಚೆ ನಡೆಸಿದ್ದೇನೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಚರ್ಚೆ ಮಾಡಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು. ಅಲ್ಲಿಯವರೆಗೆ ಯಾವುದೇ ತೆರಿಗೆ ಸಂಗ್ರಹಿಸಬಾರದು ಎಂದು ಸೂಚಿಸಿದರು.
ಈ ನಡುವೆ ಪಂಚಾಯಿತಿಯಲ್ಲಿ ತೆರಿಗೆ ಹೆಚ್ಚಳದಿಂದ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಕ್ಕಿಕೊಪ್ಪದ ಪ್ರಸನ್ನ ಭಟ್ ಹೇಳಿದ ವೇಳೆ ಮಾಜಿ ಉಪಾಧ್ಯಕ್ಷ ಪ್ರವೀಣ್ ಕುಮಾರ್, ಹಾಲಿ ಅಧ್ಯಕ್ಷ ಸಂಪತ್ ಕುಮಾರ್ ಅವರೊಂದಿಗೆ ಮಾತಿನ ಚಕಮಕಿ ನಡೆಸಿದರು. ವರ್ತಕರ ಸಂಘದ ಅಧ್ಯಕ್ಷ ಅಶೋಕ್, ಎ.ಸಿ.ವಜ್ರಪ್ಪ, ಅಡಿಕೆ ವರ್ತಕ ಪ್ರದೀಪ್, ಕೇಶವಮೂರ್ತಿ, ಕೃಷ್ಣಮೂರ್ತಿ, ಹುಮಾಯಿನ್ ಕಬೀರ್, ಗಣೇಶ್, ಮಾಲತೇಶ್, ಪಂಚಾಯಿತಿ ಪಿಡಿಒ ನವೀನ್ ಕುಮಾರ್ ಇದ್ದರು.
Jaipur bandh against revenue increase