ಚಿಕ್ಕಮಗಳೂರು: ಸಾಹಿತ್ಯ ಕೃಷಿ ಯಲ್ಲಿ ಎಲೆ ಮರೆಯ ಕಾಯಿಯಂತೆ ತೊಡಗಿರುವವರನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಸಮಾಜದಲ್ಲಿ ಸಾಹಿತಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಸಾಹಿತಿ ಪ್ರೊ.ಬಿ.ತಿಪ್ಪೇರುದ್ರಪ್ಪ ಸಲಹೆ ನೀಡಿದರು.
ಕಡೂರು ತಾಲ್ಲೂಕಿನ ಸಿಂಗಟಗೆರೆಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನೀಡಲಾಗುವ ‘ಕುಂಭಕ ಸಾಹಿತ್ಯ ಸಿರಿ’ ಪ್ರಶಸ್ತಿಯನ್ನು ಯುವ ಲೇಖಕ ಸಿಂಗಟಗೆರೆ ಶಶಿ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ಪ್ರತಿಭೆಗಳಿವೆ. ಬಹಳಷ್ಟು ಜನ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ. ಅವರನ್ನು ಗುರುತಿಸಬೇಕು.ಮಕ್ಕಳು ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಅಭಿವೃದ್ಧಿ ಸಮಿತಿ ಧರ್ಮದರ್ಶಿ ಬಿ ಕೆ ನಾಗರಾಜಪ್ಪ, ‘ಗ್ರಾಮದ ಯುವಕ ಸಿಂಗಟಗೆರೆ ಶಶಿ ಅವರಿಗೆ ಪ್ರಶಸ್ತಿ ಲಭಿಸಿರುವುದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದೆ’ ಎಂದರು.
ಸಿರಿಗನ್ನಡ ವೇದಿಕೆಯ ಜಿಲ್ಲಾಧ್ಯಕ್ಷ ಎಂ.ಆರ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಕುಂದೂರು ಅಶೋಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಕ ಬಿ.ಡಿ. ಚಂದ್ರಶೆಟ್ಟಿ, ಸಿಂಗಟಗೆರೆ ಕಲ್ಲೇಶಪ್ಪ, ಮಲ್ಲೇನಹಳ್ಳಿ ನಾಗರಾಜ್, ಕಡೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ವೈ.ಎಸ್. ರವಿಪ್ರಕಾಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಲಲಿತಮ್ಮ ಕಲ್ಲೇಶಪ್ಪ, ಬಿ.ಪಿ. ದೇವಾನಂದ್, ರಾಜಾ ನಾಯಕ್, ಗಂಗಾಧರ್, ಕೆ.ವಿರೂಪಾಕ್ಷಪ್ಪ, ಸಿಂಗಟಗೆರೆ ರವಿ ಇದ್ದರು.
Young writer Singagere Shashi is the awardee of ‘Kumbhaka Sahitya Siri’