ಚಿಕ್ಕಮಗಳೂರು: ಮಹರ್ಷಿ ವಾಲ್ಮೀಕಿಯವರು ಶೋಷಿತರ, ಧೀನದಲಿತರ ಹಾಗೂ ತುಳಿತಕ್ಕೊಳಗಾದವರಿಗೆ ಧ್ವನಿಯಾಗಿ ಈ ಸಮುದಾಯಗಳನ್ನು ಸಮಾಜದ ಮುನ್ನೆಲೆಗೆ ತರಬೇಕೆಂಬುದು ಅವರ ವಿಚಾರಧಾರೆಯಾಗಿತ್ತು. ಇಂತಹ ಮಹನೀಯರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಬಣ್ಣಿಸಿದರು.
ಅವರು ಇಂದು ಮಹರ್ಷಿ ವಾಲ್ಮೀಕಿ ಭವನದ ಸುಮಾರು ೭೫ ಲಕ್ಷ ರೂ ವೆಚ್ಚದಲ್ಲಿ ಕಾಂಪೌಂಡ್ ಹಾಗೂ ಇತರೆ ಕಾಮಗಾರಿಗಳ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು.
ಬುದ್ದ, ಬಸವ, ಕನಕ, ಅಂಬೇಡ್ಕರ್, ವಾಲ್ಮೀಕಿ ಒಂದು ಧರ್ಮಕ್ಕೆ ಸೇರಿದ ಮಹಾ ಪುರಷರಲ್ಲ. ಇವರೆಲ್ಲರೂ ಶೋಷಿತರು ಹಾಗೂ ತುಳಿತಕ್ಕೊಳಗಾದವರ ಸಮಾನತೆ ತರಬೇಕೆಂಬ ವಿಚಾರಧಾರೆಗಳು ಒಂದೇ ಆಗಿರುವುದರಿಂದ ಇಂದಿಗೂ ಜಯಂತಿ ಆಚರಣೆ ಮೂಲಕ ಜೀವಂತವಾಗಿರುವರೆಂದು ಹೇಳಿದರು.
ವಾಲ್ಮೀಕಿ ಸಮುದಾಯ ಭವನ ಎಲ್ಲಾ ವರ್ಗದ ಬಡವರಿಗೆ ಕಡಿಮೆ ದರದಲ್ಲಿ ದೊರೆಯುವಂತಾಗಬೇಕು. ಇದು ಆದಾಗ ಮಾತ್ರ ಸರ್ವರಲ್ಲಿ ಆರ್ಥಿಕ ಸಮಾನತೆ ಕಾಣಲು ಸಾಧ್ಯ ಎಂದು ತಿಳಿಸಿದರು.
ಚುನಾವಣಾ ಪೂರ್ವದಲ್ಲಿ ಘೋಷಿಸಿದ್ದ ೫ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ೭ ತಿಂಗಳಲ್ಲಿ ಅನುಷ್ಠಾನಕ್ಕೆ ತರಲಾಗಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ೬೩ ಸಾವಿರ ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ಸುಮಾರು ೬೦ ಕೋಟಿ ರೂ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ೭೯ ಸಾವಿರ ಫಲಾನುಭವಿಗಳು ನೊಂದಾಯಿಸಿಕೊಂಡಿದ್ದು, ೨೦ ಕೋಟಿ ರೂ ಅನುದಾನ ವ್ಯಯ ಮಾಡಲಾಗಿದೆ ಎಂದರು.
ತಾವು ಶಾಸಕರಾಗಿ ಹೆಚ್ಚು ಮಾತನಾಡದೆ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧನೆಯೇ ಮಾತನಾಡಬೇಕು, ಆ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಲು ಬದ್ಧನಾಗಿದ್ದು, ಮೆಡಿಕಲ್ ಕಾಲೇಜು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ೪೫೦ ಕೋಟಿ ರೂ ಆಡಳಿತಾತ್ಮಕ ಮಂಜೂರಾತಿ ಪಡೆದಿದ್ದರಿಂದ ಮಾಜಿ ಶಾಸಕರು ಸ್ಥಳ ಪರಿಶೀಲನೆ ಮಾಡಿ, ಪ್ರಚಾರ ಗಿಟ್ಟಿಸಿಕೊಂಡಿದ್ದಾರೆಂದು ಆರೋಪಿಸಿದರು.
೨೦೦೪ ರ ಹಿಂದೆ ಬಿಜೆಪಿ ನಾಯಕರ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ನಾನು ವಿಷಯ ಪ್ರಸ್ತಾಪಿಸುವುದಿಲ್ಲ ಜೊತೆಗೆ ಕಾಮಗಾರಿಗಳಲ್ಲಿ ಕಮಿಷನ್ ಹೊಡೆಯುವ ಅಗತ್ಯ ಕಾಂಗ್ರೆಸ್ ನಾಯಕರಿಗೆ ಇಲ್ಲ. ಈ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಮಾಜಿ ಶಾಸಕರು ಬಿಡಬೇಕು, ಇದರ ಗುತ್ತಿಗೆದಾರರು ಯಾರೂ ಎಂಬುದರ ಅರಿವು ನನಗಿದೆ ಎಂದು ಹೇಳಿದರು.
ಮೆಡಿಕಲ್ ಕಾಲೇಜು ಕಾಮಗಾರಿ ಇನ್ನೆರೆಡು ತಿಂಗಳಲ್ಲಿ ಪೂರ್ಣಗೊಳ್ಳುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಂದಿನ ೧ ವರ್ಷದಲ್ಲಿ ಸಂಪೂರ್ಣವಾಗಿ ಮುಗಿಸಿ, ಸಾರ್ವಜನಿಕ ಉಪಯೋಗಕ್ಕೆ ಅರ್ಪಣೆ ಮಾಡುತ್ತೇವೆಂದು ಭರವಸೆ ನೀಡಿದರು.
ಕಳೆದ ೮ ತಿಂಗಳಲ್ಲಿ ಕ್ಷೇತ್ರದಾದ್ಯಂತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ೧೫ ಕೋಟಿ ರೂ ಮಂಜೂರಾಗಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ೭೯ ಲಕ್ಷ ರೂ ವಿವಿಧ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ, ಕಾಮಗಾರಿ ಆರಂಭವಾಗಿದೆ. ತಾ.ಪಂ ಅನುದಾನದಲ್ಲಿ ೧೨೩ ಲಕ್ಷ ರೂ ಕಾಮಗಾರಿ ಆರಂಭವಾಗಿದೆ. ಎಸ್ಇಪಿಟಿಎಸ್ ಯೋಜನೆಯಡಿ ೭೫ ಲಕ್ಷ ರೂ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ. ಲೋಕೋಪಯೋಗಿ ಇಲಾಖೆಯಿಂದ ೨ ಕೋಟಿ ರೂ ಅನುದಾನ ಬಿಡುಗಡೆಯಾಗಿ ರಸ್ತೆಗಳ ಅಭಿವೃದ್ಧಿ ಕೈಗೊಳ್ಳಲಾಗಿದೆ. ೯೦ ಲಕ್ಷ ರೂ ವೆಚ್ಚದಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿವೇಣುಗೋಪಾಲ್, ಸದಸ್ಯರಾದ ಗುರುಮಲ್ಲಪ್ಪ, ಜಿಲ್ಲಾ ವಾಲ್ಮಿಕಿ ಯುವಕ ಸಂಘದ ಅಧ್ಯಕ್ಷ ಜಗಧೀಶ್ ಕೋಟೆ, ಜಿಲ್ಲಾ ಬಿ.ಎಸ್.ಪಿ ಅಧ್ಯಕ್ಷ ರಾಧಾಕೃಷ್ಣ, ಹಿರೇಮಗಳೂರು ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಶ್ರೀನಿವಾಸ್, ಗುಣವತಿ, ಐಟಿಡಿಪಿ ಅಧಿಕಾರಿ ಭಾಗಿರಥೀ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Compound of Maharshi Valmiki Bhavan – Suspicion of other works