ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕುಡಿಯುವ ನೀರು ಮತ್ತು ಮೇವು ಕೊರತೆ ಎದುರಾಗದಂತೆ ಜಿಲ್ಲಾ ಪಂಚಾಯತ್ ವತಿಯಿಂದ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಬಿ.ಗೋಪಾಲಕೃಷ್ಣ ತಿಳಿಸಿದರು.
ಮಂಗಳವಾರ ನಗರದ ಪ್ರೆಸ್ಕ್ಲಬ್ ವತಿಯಿಂದ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜಿಲ್ಲೆಯ ೯ ತಾಲೂಕುಗಳಲ್ಲಿ ೮ ತಾಲೂಕುಗಳನ್ನು ತೀವ್ರ ಬರಪೀಡಿತ ಹಾಗೂ ಸಾಧಾರಣ ಬರಪೀಡಿತ ತಾಲೂಕು ಎಂದು ಸರ್ಕಾರ ಘೋಷಣೆ ಮಾ ಡಿದೆ. ೧೦ ಗ್ರಾಮ ಪಂಚಾಯತ್ಗಳ ೧೧ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಪರ್ಯಾಯ ವ್ಯವಸ್ಥೆಯನ್ನು ಮಾಡಲಾ ಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ಎಲ್ಲೆಲ್ಲಿ ಎದುರಾಗಬಹುದೆಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದು, ೩೦೩ ಹಳ್ಳಿಗಳಲ್ಲಿ ಕುಡಿಯುವ ನೀರಿನ ಲಭ್ಯತೆ ಅಭಾವವಾಗುವ ಸೃಷ್ಟಿಯಾಗುವ ಬಗ್ಗೆ ಮಾಹಿತಿ ಇದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸ್ಥಳೀಯವಾಗಿ ದೊರೆಯುವ ನೀರಿನ ಮೂಲಗಳು ಹಾಗೂ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಸಜ್ಜಾಗಿರಿಸಲಾಗಿದೆ. ನೀರಿನ ಅಭಾವ ಎದುರಾದ ತಕ್ಷಣ ನೀರು ಒದಗಿಸಲಾ ಗುವುದು ಎಂದು ಹೇಳಿದರು.
ಮಲೆನಾಡು ವಿಭಿನ್ನವಾಗಿದ್ದು, ಅನೇಕ ಕುಗ್ರಾಮಗಳು ನೈಸರ್ಗಿಕವಾಗಿ ಬರುವ ಝರಿಗಳನ್ನು ಅವಲಂಭಿಸಿದ್ದಾರೆ. ಈ ಝರಿಗಳಲ್ಲಿ ನೀರು ಬತ್ತಿದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು ಇನ್ನೂ ಟ್ಯಾಂಕರ್ಗಳು ಹೋಗಲು ಸಾಧ್ಯವಾಗದ ಕುಗ್ರಾಮಗಳಿಗೆ ಜೀಪ್ಗಳಲ್ಲಿ ನೀರು ಪೂರೈಕೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿನ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮವಹಿಸಲಾಗಿದೆ. ಮುಂದಿನ ೨೮ವಾರಗಳಿಗೆ ಸಾಕಾಗುವಷ್ಟು ಮೇವಿನ ಲಭ್ಯತೆ ಈಗಾಗಲೇ ಇದೆ. ಅಮೃತ್ ಮಹಲ್ ಕಾವಲ್ನಲ್ಲಿ ಈಗಾಗಲೇ ಮೇವು ಬೆಳೆಯಲಾಗುತ್ತಿದೆ. ಕುಡಿಯುವ ನೀರು ಮತ್ತು ಮೇವಿಗೆ ಕೊರತೆಯಾಗದಂತೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಕೊಪ್ಪ ಮತ್ತು ಶೃಂಗೇರಿ ಭಾಗದಲ್ಲಿ ನಾಲ್ಕು ಮಂಗನಕಾಯಿಲೆ ಪ್ರಕರಣಗಳು ದಾಖಲಾಗಿವೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಮಂಗನ ಕಾಯಿಲೆ ನಿಯಂತ್ರಣ ಕುರಿತು ಇತ್ತೀಚೆಗೆ ಶಿವಮೊಗ್ಗದಲ್ಲಿ ಉನ್ನತ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. ಈ ಭಾಗದಲ್ಲಿ ಮಂಗನ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಜನಜಾಗೃತಿಯನ್ನು ಮೂಡಿಸಲಾಗುತ್ತಿದೆ. ಜತೆಗೆ ಜನರು ಕಾಡಿಗೆ ತೆರಳಿದ ವೇಳೆ ಏನೇನು ಮುಂಜಾಗೃತೆ ವಹಿಸಬೇಕೆಂಬ ಮಾಹಿತಿ ಮತ್ತು ತಿಳುವಳಿಕೆಯನ್ನು ನೀಡಲಾಗುತ್ತಿದೆ ಎಂದರು.
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಜನಪ್ರತಿನಿಧಿಗಳು ಇಲ್ಲದೆ ಕಾರ್ಯವನ್ನು ನಡೆಸುತ್ತಿದೆ. ಯಾವುದೇ ಕಾರಣಕ್ಕೂ ಅಭಿವೃದ್ದಿ ಕಾರ್ಯಗಳಲ್ಲಿ ಹಿಂದೆ ಬೀಳದೆ. ಇದುವರೆಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಇಲಾಖೆಗಳಲ್ಲಿ ಗರಿಷ್ಟ ಶೇ.೯೦ ರಷ್ಟು ಕಾರ್ಯಕ್ರಮಗಳು ಪ್ರಗತಿಯಲ್ಲಿವೆ ಎಂದ ಅವರು, ವರ್ಷಾಂತ್ಯದ ಅವಸರದ ಕಾಮಗಾರಿಗಳಿಗೆ ಆಸ್ಪದ ನೀಡದೆ ಆಯಾ ಕಾಲ ಕಾಲಕ್ಕೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸ್ವಸಹಾಯ ಸಂಘಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸ್ವಸಹಾಯ ಸಂಘಗಳನ್ನು ಇನಷ್ಟು ಸದೃಢಗೊಳಿಸಲು ಶ್ರಮಿಸಲಾಗುತ್ತಿದೆ. ಅವರಿಗೆ ಉತ್ತಮ ಫ್ಲಾಟ್ ಫಾರಂ ನೀಡಲಾಗುತ್ತಿದೆ ಮುಂದೊಂದು ದಿನ ದೊಡ್ಡ ಉದ್ಯಮವಾಗಿ ರೂಪುಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಮಲೆನಾಡು ಭಾಗದಲ್ಲಿ ಸ್ವಸಹಾಯ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಕಡೂರು, ಅಜ್ಜಂಪುರ ಭಾಗದಲ್ಲಿ ಇನಷ್ಟು ಉತ್ತೇಜನ ಕೊಡುವ ಕೆಲಸ ಮಾಡಲಾಗುತ್ತಿದೆ. ಕೇರಳ ಮಾದರಿಯಲ್ಲಿ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.
ಮಳೆ ಕೊರತೆಯಿಂದ ಫಸಲಿನಲ್ಲಿ ಹಿನ್ನಡೆಯಾಗಿರುವುದು ನಿಜ, ಹಿಂಗಾರು ಮಳೆಯಲ್ಲಿ ಬಿತ್ತನೆ ಕಾರ್ಯ ಉತ್ತಮವಾಗಿ ನಡೆದಿದೆ, ಮುಂಗಾರು ಮಳೆ ಕಡಿಕೆಯಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತವಾಗಿದ್ದು ಉತ್ಪಾದನೆಯಲ್ಲಿ ಕಡಿಮೆಯಾಗಿದೆ. ತೋಟಗಾರಿಕೆ ಬೆಳೆಯಲ್ಲಿ ಶೇ.೪೦ರಷ್ಟು ಕಡಿಮೆಯಾಗಿದೆ. ಅಡಿಕೆಗೆ ಎಲೆಚುಕ್ಕಿರೋಗ, ಹಳದಿ ಎಲೆರೋಗ ಭಾದೆಯಿಂದ ಇಳುವರಿ ಕುಂಠಿತವಾಗಿದೆ. ತೆಂಗು ಬೆಳೆಗೆ ಕಪ್ಪು ತಲೆ ಹುಳು ರೋಗಭಾದೆಯಿಂದ ನಷ್ಟ ಉಂಟಾಗಿದೆ. ಇದಕ್ಕೆ ಔಷಧವನ್ನು ವಿತರಿಸುವ ಕೆಲಸವನ್ನು ಇಲಾಖೆಯಿಂದ ಮಾಡಲಾಗಿದೆ ಎಂದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರಾಪರ್ಟಿ ಮೆಜರ್ಮೆಂಟ್ ನಡೆಸಲಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತ್ ತೆರಿಗೆ ಸಂಗ್ರಹ ಹೆಚ್ಚಳವಾಗುತ್ತಿದೆ. ಈ ಹಣದಲ್ಲಿ ಗ್ರಾಮದ ಅಭಿವೃದ್ದಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೆಸ್ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಡಾ|ಯೋಗೀಶ್, ಪ್ರೆಸ್ಕ್ಲಬ್ ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ ಇದ್ದರು.
Guest program of the month organized by Pressclub