ಚಿಕ್ಕಮಗಳೂರು: ಮಂಡ್ಯ ಜಿಲ್ಲೆ ಕೆರೆಗೋಡು ಗ್ರಾಮದಲ್ಲಿ ಹನುಮ ಧ್ವಜ ಪುನಃ ಸ್ಥಾಪಿಸಬೇಕೆಂದು ಆಗ್ರಹಿಸಿ ಇಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಜಿಲ್ಲಾಕಾರ್ಯದರ್ಶಿ ಟಿ.ರಂಗನಾಥ್ ನೇತೃತ್ವದಲ್ಲಿ ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಡ್ಯ ತಾಲ್ಲೂಕಿನ ಕೆರೆಗೋಡು ಗ್ರಾಮದಲ್ಲಿ ಕಳೆದ ೪೦ ವರ್ಷಗಳಿಂದ ಹಾರಾಡುತ್ತಿದ್ದ ಹನುಮ ಧ್ವಜವನ್ನು ನವೀಕರಣ ಮಾಡಿ ಆಸ್ತಿಕ ಗ್ರಾಮಸ್ಥರು ಸೇರಿ ಹೂಸ ಅರ್ಜುನ ಸ್ಥಂಭದಲ್ಲಿ ಏರಿಸಿದ ಹನುಮ ಧ್ವಜವನ್ನು ಸರ್ಕಾರ ಕೆಳಗೆ ಇಳಿಸಿದ ಘಟನೆ ರಾಜ್ಯದ ಎಲ್ಲ ಹಿಂದೂ ಬಾಂಧವರ ಮನಸ್ಸಿಗೆ ನೋವುಂಟುಮಾಡಿದ್ದು, ಧ್ವಜ ಇಳಿಸಿದ ಘಟನೆಯನ್ನು ಹಿಂದೂ ಸಮಾಜವು ಖಂಡಿಸುತ್ತದೆ. ನಮ್ಮ ದೇಶವು ಜಾತ್ಯಾತೀತ ಮಾತ್ರವಾಗಿದ್ದು ಧರ್ಮಾತೀತವಲ್ಲ ಎಂದು ಮುಖ್ಯಕಾರ್ಯದರ್ಶಿಗಳಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.
ಕಳೆದ ೪೦ ವರ್ಷಗಳಿಂದ ಭಜನೆ ಮಾಡುತ್ತಾ ಯಾವ ತೊಂದರೆಯು ಮಾಡದೆ, ಶ್ರೀರಾಮ ಭಜನಾ ಮಂಡಳಿಯವರು ಹಾರಿಸಿದ್ದ ಧ್ವಜದ ಸ್ಥಂಭವು ಶಿಥಿಲಗೊಂಡ ಕಾರಣಕ್ಕೆ ಕೆರೆಗೋಡು ಗ್ರಾಮ ಪಂಚಾಯಿತಿಯ ನ.೨೯ರ ಸಾಮಾನ್ಯ ಸಭೆಯಲ್ಲಿ ಶ್ರೀರಾಮ ಭಜನಾ ಮಂಡಳಿ ಮತ್ತಿತರರ ಅರ್ಜಿಯ ಮೇರೆಗೆ ಅನುಮೋಧನೆಗೊಂಡಂತೆ ಉತ್ತಮ ಧ್ವಜ ಸ್ತಂಭ ಸ್ಥಾಪಿಸಿ ಅದರಲ್ಲಿ ಹಾರಿಸಿದ ಹನುಮ ಧ್ವಜವನ್ನು ಸರ್ಕಾರಿ ಅಧಿಕಾರಿಗಳು ಇಳಿಸಿದ್ದು ಅದನ್ನು ಮತ್ತೆ ಏರಿಸಬೇಕೆಂದು ಬಹುಸಂಖ್ಯಾತ ಹಿಂದು ಸಮಾಜದ ಪರವಾಗಿ ಆಗ್ರಹಿಸಿದ್ದಾರೆ.
ಕರ್ನಾಟಕದಲ್ಲೇ ಹುಟ್ಟಿದ ಶಕ್ತಿ ವೀರತೆಯ ಸಂಕೇತವಾಗಿರುವ ರಾಜ್ಯದ ಯುವ ಜನತೆಗೆ ಶಕ್ತಿ, ಯುಕ್ತಿ, ನೈತಿಕತೆ ಇತ್ಯಾದಿ ಸದ್ಗುಣಗಳಿಗೆ ಪ್ರೇರಣೆ ನೀಡುವ ವೀರಾಗ್ರೇಸರ ಹನುಮ ಧ್ವಜವನ್ನು ಗೌರವಿಸುವುದು ರಾಜ್ಯದ ಕರ್ತವ್ಯವಾಗಿದ್ದು, ಅದು ಎಲ್ಲೇ ಹಾರಲಿ ಅದಕ್ಕೆ ಹಾನಿಯಾಗದಂತೆ ಸರ್ಕಾರ ಸಂಬಂಧಿತ ಎಲ್ಲಾ ಇಲಾಖೆಗಳಿಗೆ ಆದೇಶ ನೀಡಲು ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ವಿಹೆಚ್ಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ಪೈ, ಅಮಿತ್, ಸುನಿಲ್ ಆಚಾರಿ, ದಿಲೀಪ್ಶೆಟ್ಟಿ, ಆಟೋ ಶಿವಣ್ಣ, ಆಕಾಶ್ ಮತ್ತಿತರರಿದ್ದರು.
Demand to restore Hanuman flag in Keregodu village