ಚಿಕ್ಕಮಗಳೂರು: ಜಿಲ್ಲೆಯ ಭೂ ದಾಖಲೆಗಳನ್ನು ಡಿಜಿಟಲ್ ಗಣಕೀಕರಣ ಮಾಡುತ್ತಿರುವುದರಿಂದ ರೈತರಿಗೆ ಬೇಕಾದ ಅಗತ್ಯ ಭೂ ದಾಖಲೆಗಳು ನಿಗದಿತ ಸಮಯದಲ್ಲಿ ದೊರೆಯಲು ಅನುಕೂಲವಾಗಿದೆ ಎಂದು ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.
ಅವರು ಇಂದು ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಭೂ ದಾಖಲೆಗಳನ್ನು ಗಣಕೀಕರಣ (ಡಿಜಿಟಲ್) ಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಲ್ಲಿನ ತಾಲ್ಲೂಕು ಕಛೇರಿಯಲ್ಲಿ ಹಳೆಯ ಭೂ ದಾಖಲೆಗಳನ್ನು ಗಣಕೀಕರಣ ಮಾಡಿರುವುದರಿಂದ ಆಡಳಿತದಲ್ಲಿ ಸುಧಾರಣೆ ತಂದು ರೈತರ ದಾಖಲೆಗಳು ಕಳೆದು ಹೋಗದೆ ಶಾಶ್ವತವಾಗಿ ಉಳಿಯಲಿದೆ ಇದರ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತೆ ಕರೆ ನೀಡಿದರು.
ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ಜಿಲ್ಲಾಡಳಿತದ ವತಿಯಿಂದ ಭೂ ಸುರಕ್ಷಾ ಯೋಜನೆಯನ್ನು ಸಚಿವರು ಉದ್ಘಾಟಿಸಿದ್ದು ಇದರ ಸದುಪಯೋಗವನ್ನು ಜಿಲ್ಲೆಯ ಹಾಗೂ ತಾಲ್ಲೂಕಿನ ಜನತೆ ಪಡೆದು ಕೊಳ್ಳಬೇಕೆಂದು ವಿನಂತಿಸಿದರು.
ತಮ್ಮ ಅಗತ್ಯ ದಾಖಲೆಗಳನ್ನು ಕೋರಿ ಅರ್ಜಿಸಲ್ಲಿಸುವ ರೈತರಿಗೆ ಭೂ ದಾಖಲೆಗಳನ್ನು ಒದಗಿಸಲು ಇದು ಪೂರಕವಾಗಿದೆ. ಜೊತೆಗೆ ಸಂಬಂಧಪಟ್ಟ ಅರ್ಜಿದಾರರಿಗೆ ದಾಖಲೆ ಒದಗಿಸಿದ ಸಂಪೂರ್ಣ ಮಾಹಿತಿ ರವಾನೆಯಾಗಲಿದೆ ಎಂದು ಹೇಳಿದರು.
ಸಾರ್ವಜನಿಕರಿಗೆ ಜನಸ್ನೇಹಿ ಆಡಳಿತ ವ್ಯವಸ್ಥೆ ಕಲ್ಪಿಸಬೇಕೆಂಬ ದೃಷ್ಠಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರ ಮೂಲಕ ಭೂ ದಾಖಲೆಗಳ ಡಿಜಿಟಲ್ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ|| ಬಿ.ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ದಲ್ಜಿತ್ಕುಮಾರ್, ತಹಶೀಲ್ದಾರ್ ಸುಮಂತ್ ಮತ್ತಿತರರಿದ್ದರು.
Drive for computerization (digital) of land records