ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಲ್ಲಿರುವ ಕೀಳರಿಮೆ ಮತ್ತು ಅಸಡ್ಡೆ ಬರದಂತೆ ಮುಂದಿನ ದಿನಗಳಲ್ಲಿ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ವೈದ್ಯರು ಕರ್ತವ್ಯ ನಿರ್ವಹಿಸಬೇಕೆಂದು ಶಾಸಕ ಹೆಚ್.ಡಿ ತಮ್ಮಯ್ಯ ಕರೆ ನೀಡಿದರು.
ಅವರು ಇಂದು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಲೈಫ್ಲೈನ್ ಫೀಡ್ಸ್ ಸಂಸ್ಥೆಯವರು ಸುಮಾರು ೧೦ ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಿರುವ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುಮಾರು ೧೭೦ ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತವಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಇನ್ನೆರಡು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಸಮರ್ಪಣೆ ಮಾಡಿ ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲು ಬದ್ದವಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಮೆರಿಟ್ ಆಧಾರದಲ್ಲಿ ನೇಮಕವಾಗಿ ಬಂದಿರುವುದರಿಂದ ಅವರಲ್ಲಿ ನಂಬಿಕೆ ಇಟ್ಟು ಸಾರ್ವಜನಿಕರು ಚಿಕಿತ್ಸೆ ಪಡೆಯಬೇಕೆಂದು ಮನವಿ ಮಾಡಿದರು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು ೨೦ ಲಕ್ಷ ರೂ ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಬಸ್ಸನ್ನು ಕೊಡುಗೆ ನೀಡಿರುವ ಲೈಫ್ಲೈನ್ ಸಂಸ್ಥೆ ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕದ ವೆಚ್ಚ ಭರಿಸುವಲ್ಲಿ ಮುಂದಾಗಿದ್ದು, ನಿಸ್ವಾರ್ಥ ಸೇವೆ ಸಲ್ಲಿಸಿ ಸಮಾಜದ ಆಸ್ತಿ ಆಗಿರುವ ಕಿಶೋರ್ಕುಮಾರ್ ಹೆಗ್ಗಡೆಯವರಿಗೆ ಆರೋಗ್ಯ-ಆಯಸ್ಸು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಎಲ್ಲರಿಗೂ ದೇವರು ಶ್ರೀಮಂತಿಕೆ ಕೊಡುತ್ತಾರೆ. ಆದರೆ ಎಲ್ಲರ ಮನಸ್ಸು ಶ್ರೀಮಂತವಾಗಿರುವುದಿಲ್ಲ. ಈ ಎರಡನ್ನೂ ಕಿಶೋರ್ ಕುಮಾರ್ ಹೆಗ್ಗಡೆಯವರಿಗೆ ಕೊಟ್ಟಿದ್ದು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತೀ ಹೆಚ್ಚು ಆರ್ಥಿಕ ನೆರವು ನೀಡಿರುವುದರಿಂದ ಬಡವರಿಗೆ ಅನುಕೂಲವಾಗಿದೆ ಎಂದು ಅಭಿನಂದಿಸಿದರು.
ಕಳೆದ ೩೫ ವರ್ಷಗಳಿಂದ ಒಡನಾಡಿಯಾಗಿರುವ ಕಿಶೋರ್ ಕುಮಾರ್ ಹೆಗ್ಗಡೆಯವರು ಐಡಿಎಸ್ಜಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿಗೆ ಸುಮಾರು ೫೦ ಲಕ್ಷ ರೂ ವೆಚ್ಚದಲ್ಲಿ ಡೆಸ್ಕ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆಂದು ಹೇಳಿದರು.
ಸರ್ಕಾರಕ್ಕೆ ಸಮಾನಾಂತರವಾಗಿ ಹಲವಾರು ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ಕೊಡುವ ಮೂಲಕ ಸೇವೆ ಸಲ್ಲಿಸುತ್ತಿವೆ. ಅದೇ ರೀತಿ ಕಿಶೋರ್ಕುಮಾರ್ ಹೆಗ್ಗಡೆ ಸಹ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂದು ಶ್ಲಾಘಿಸಿದರು.
ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಸಂಸ್ಥಾಪಕ ಕಿಶೋರ್ಕುಮಾರ್ ಹಗ್ಗಡೆ ಮಾತನಾಡಿ, ಓರ್ವ ಸರ್ಕಾರಿ ಅಧಿಕಾರಿ ಖಾಸಗಿಯವರ ಬಳಿ ಬಂದು ಸೌಲಭ್ಯ ಕೇಳುವ ಅಗತ್ಯತೆ, ಅವಶ್ಯಕತೆ ಇರುವುದಿಲ್ಲ. ಆದರೂ ಜಿಲ್ಲಾ ಸರ್ಜನ್ ಡಾ|| ಮೋಹನ್ಕುಮಾರ್ ರವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವುದನ್ನು ಅಭಿನಂದಿಸಿದರು.
೧.೫೦ ಕೋಟಿ ರೂ ವೆಚ್ಚದ ವಸ್ತುಗಳು ಗುಜರಿಗೆ ಹಾಕಿದರೆ ೫೦ ಲಕ್ಷಕ್ಕೂ ಹೋಗುವುದಿಲ್ಲ ಈ ನಿಟ್ಟಿನಲ್ಲಿ ಆಸ್ಪತ್ರೆಯ ಮಂಚಗಳು ಮತ್ತು ಪರಿಕರಗಳನ್ನು ದುರಸ್ಥಿಮಾಡಿಕೊಟ್ಟಿರುವುದರಿಂದ ಸರ್ಕಾರಕ್ಕೆ ಹೊರೆ ಕಡಿಮೆ ಮಾಡಿ, ಜನರ ಉಪಯೋಗಕ್ಕೆ ನೀಡಿದ್ದೇವೆ ಎಂದು ಹೇಳಿದರು.
ಸುಮಾರು ೩೦ ಲಕ್ಷ ರೂ ವೆಚ್ಚದಲ್ಲಿ ಹಾಲಿ ಇರುವ ಕಣ್ಣಿನ ಆಸ್ಪತ್ರೆ ಕಟ್ಟಡವನ್ನು ಸುಸಜ್ಜಿತವಾದ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಭರವಸೆ ನೀಡಿದ ಅವರು ಇದರಿಂದಾಗಿ ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾಗುತ್ತದೆಂದು ಹೇಳಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಸರ್ಜನ್ ಡಾ|| ಮೋಹನ್ಕುಮಾರ್ ಮಾತನಾಡಿ, ಹಾಲಿ ಇದ್ದ ೪೪ ಮಂಚಗಳನ್ನು ದುರಸ್ಥಿ ಮಾಡಿ, ಬಣ್ಣ ಬಳಿದು ವಾಪಸ್ ನೀಡಿದ್ದು ವಾರ್ಡ್ಗಳಲ್ಲಿ ಇಡಲಾಗಿದೆ. ಬೆಡ್ಸೈಡ್ ಲಾಕರ್ ೮೫, ಗಾಡ್ರೇಜ್ ಬೀರು ೩, ರ್ಯಾಕ್ಗಳು ೧೧, ೨ ವೀಲ್ಚೇರ್, ಸ್ಟ್ರಕ್ಚರ್ ೩, ಲಗೇಜ್ ಫ್ಯಾನ್ ೩, ಟ್ರೀಟ್ಮೆಂಟ್ ಸ್ಟ್ಯಾಂಡ್ ೨ ಮುಂತಾದವುಗಳನ್ನು ದುರಸ್ಥಿಮಾಡಿಕೊಟ್ಟಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಲೈಫ್ಲೈನ್ ಫೀಡ್ಸ್ ಸಂಸ್ಥೆಯ ಆಡಳಿತಾಧಿಕಾರಿ ಸುಬ್ರಮಣ್ಯ, ಜನರಲ್ ಮ್ಯಾನೇಜರ್ ಗಣೇಶ್ ಕಾಮತ್, ಶಮಿ, ರವಿ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಮೊದಲಿಗೆ ಜಲಜಾಕ್ಷಿ ಸ್ವಾಗತಿಸಿದರು.
Handing over of renovation furniture by Lifeline Feeds in District Hospital premises