ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನರ ನಿರೀಕ್ಷೆಗೂ ಹೆಚ್ಚಿನ ಒತ್ತುನೀಡಿ ಬಜೆಟ್ ಮಂಡಿಸಿದಾರೆ. ಆದರೆ ವಿರೋಧ ಪಕ್ಷವಾದ ಬಿಜೆಪಿಯವರು ಸಣ್ಣತನ ಪ್ರದರ್ಶಿಸಿ ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧೫ ಬಜೆಟ್ಗಳನ್ನು ಮಂಡಿಸಿರುವ ಸಿದ್ದರಾಮಯ್ಯನವರು ತಮ್ಮ ೧೬ನೇ ಬಜೆಟ್ನಲ್ಲಿ ೫೨ ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಹಣ ಮೀಸಲಿಟ್ಟು ಎಲ್ಲಾ ವರ್ಗದ ಜನರನ್ನು ತಲುಪುವಂತೆ ನಿರೀಕ್ಷೆಗೂ ಮೀರಿದ ಒತ್ತು ನೀಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದಾರೆಂದರು.
ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಮೀಸಲಿಟ್ಟು ಬಹುಪಾಲು ಜನರಿಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಇದಕ್ಕೆ ಕಾರಣಕರ್ತರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಸಂಪುಟ ದರ್ಜೆ ಸಚಿವರು ಸೇರಿದಂತೆ ಎಲ್ಲರಿಗೂ ಪಕ್ಷದ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.
ರಾಜ್ಯದ ಒಟ್ಟಾರೆ ಅಭಿವೃದ್ಧಿಗೆ ೩,೭೧,೩೮೧ ಕೋಟಿ ರೂ ಗಾತ್ರದ ಬಜೆಟ್ ಮಂಡಿಸಿದ್ದು, ಎಲ್ಲರಿಗೂ ನ್ಯಾಯ ಸಮ್ಮತವಾದ ಪಾಲು ನೀಡಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ್ದಾರೆ. ರೈತರಿಗೆ ನೆರವಾಗುವ ಸಲುವಾಗಿ ೪೫೦ ಕೋಟಿ ರೂ ಸುಸ್ಥಿ ಬಡ್ಡಿ ಮನ್ನಾ ಮಾಡಿದ್ದಾರೆ, ಕೃಷಿ ಪ್ರಾಧಿಕಾರ ರೈತರು ಹಾಗೂ ಕಾರ್ಮಿಕರ ನೆರವಿಗೆ ಅನುದಾನ ನೀಡಿ ತೀರ್ಮಾನ ಕೈಗೊಂಡಿದ್ದಾರೆಂದರು.
ಇಡೀ ದೇಶವೇ ಮೆಚ್ಚುವಂತಹ ಬಜೆಟ್ ಮಂಡಿಸಿದ್ದಾರೆ. ಈ ಬಜೆಟ್ ಮೇಲಿನ ಚರ್ಚೆಗೂ ಅವಕಾಶ ಕೊಡದೆ ವಿರೋಧ ಪಕ್ಷವಾದ ಬಿಜೆಪಿಯವರು ಸಣ್ಣತನ ಪ್ರದರ್ಶನ ಮಾಡಿದ್ದಾರೆ ಇಂತಹ ಅಜ್ಞಾನ ಇರುವ ವಿರೋಧ ಪಕ್ಷದ ನಾಯಕರು ಹಿಂದೆಂದೂ ಕಂಡಿರಲಿಲ್ಲ. ಜನಪರವಾಗಿ ಮಂಡಿಸಿರುವ ಬಜೆಟ್ ಬಗ್ಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆಂದು ಹೇಳಿದರು.
ಬಿಜೆಪಿಯವರ ನಡವಳಿಕೆಯಿಂದ ಅನನುಭವಿ ಮತ್ತು ಪುಂಡಾಟಿಕೆಗೆ ಹೆಸರಾದ ವಿರೋಧ ಪಕ್ಷದ ನಾಯಕನನ್ನು ಹೊಂದಿದಂತಾಗಿದೆ. ಯಾವುದೇ ಕೆಲಸ ಮಾಡದ ಬಿಜೆಪಿಯವರು ಜನರಿಗೆ ಮುಖ ತೋರಿಸಲಾಗದೆ ಬಜೆಟ್ ವಿರುದ್ಧ ಚಳುವಳಿ ನಡೆಸಿದ್ದಾರೆಂದು ಟೀಕಿಸಿದರು.
ಈ ಜಿಲ್ಲೆಗೆ ಸ್ಪೈಸ್ ಪಾರ್ಕ್, ಶೃಂಗೇರಿ ಆಸ್ಪತ್ರೆ ಉನ್ನತೀಕರಣ ಸೇರಿದಂತೆ ಎಲ್ಲಾ ಯೋಜನೆಗಳಿಗೆ ಅನುದಾನ ಒದಗಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಾರಣವಾಗಿರುವ ಸರ್ಕಾರಕ್ಕೆ ಜಿಲ್ಲಾ ಕಾಂಗ್ರೆಸ್ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.
People’s budget beyond expectations for the development of the state