ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ನೆಹರು ನಗರ ಸಹರಾ ಶಾದಿಮಾಲ್ ಬಳಿ ಕಸದ ಗಾಡಿಗಳ ನಿಲ್ದಾಣ ಮತ್ತು ಕಾಂಪೌಂಡ್ ನಿರ್ಮಾಣದ ಕಾಮಗಾರಿಯಿಂದ ಸುತ್ತ-ಮುತ್ತಲ ಸಾರ್ವಜನಿಕರಿಗೆ ತೊಂದರೆ ನಗರಸಭೆ ಉಪಾಧ್ಯಕ್ಷರಾದ ಅಮೃತೇಶಚನ್ನಕೇಶವ ವರಿಂದ ಉಪವಾಸ ಸತ್ಯಾಗ್ರಹ, ಸ್ಥಳೀಯರ ಜೋತೆ ಪ್ರತಿಭಟನೆ ನಡೆಸಿದರು
ಸಹರಾ ಶಾದಿಮಾಲ್ ಪಕ್ಕದ ನಗರಸಭೆ ಜಾಗದಲ್ಲಿ ಕಸದ ಗಾಡಿಗಳ ನಿಲುಗಡೆ ನಿಲ್ದಾಣ ಮತ್ತು ಸುತ್ತಲು ಕಾಂಪೌಂಡ್ ನಿರ್ಮಿಸಲು ಜೆಸಿಬಿ ಕೆಲಸ ನಡೆಯುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ, ನಗರಸಭೆ ಉಪಾಧ್ಯಕ್ಷ ಅಮೃತೇಶ್ ಇಲ್ಲಿ ಕಸದ ಡಂಪಿಂಗ್ ಯಾರ್ಡ್ ಅಥವಾ ಯಾವುದೇ ಕಾಮಗಾರಿಗಳು ನಡೆಯಬಾರದು ಎಂದು ಜೆಸಿಬಿ ಚಾಲಕನಿಗೆ ಕೆಲಸ ನಿಲ್ಲಿಸುವಂತೆ ತಾಕೀತು ಮಾಡಿ ಸ್ಥಳದಲ್ಲೇ ಧರಣಿ ಕುಳಿತರು.
ಸ್ಥಳೀಯ ಬಡಾವಣೆಯ ನಿವಾಸಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ವಿರುದ್ಧ ಘೋಷಣೆ ಕೂಗಿದರು.
ನಗರಸಭೆ ಉಪಾಧ್ಯಕ್ಷ ಅಮೃತೇಶ ಚನ್ನಕೇಶವ ಮಾತನಾಡಿ, ಕಳೆದ ೨ ವರ್ಷದ ಹಿಂದೆ ಇಲ್ಲಿ ಡಂಪಿಂಗ್ಪಾಯಿಂಟ್ ಮಾಡಿದ್ದಾರೆ. ಆಗಲೇ ವಿರೋಧಿಸಿದ್ದೆವು. ಇಲ್ಲಿ ಡಂಪಿಂಗ್ ಯಾರ್ಡ್ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ, ಈ ಕಸದ ಡಂಪಿಂಗ್ ಪಾಯಿಂಟನ್ನು ಬೇರೆಡೆ ಸ್ಥಳಾಂತರ ಮಾಡುವ ವರೆಗೂ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು, ಇದರ ಬಗ್ಗೆ ಶಾಸಕ ತಮ್ಮಯ್ಯ ಅವರಿಗೂ ಮನವಿ ಮಾಡಿದ್ದೇವೆ ಎಂದರು.
ಆದರೆ, ನಮ್ಮ ಮನವಿಗೆ ಮನ್ನಣೆ ನೀಡದೆ ಇಂದು ಕಸದ ಗಾಡಿಗಳ ನಿಲ್ದಾಣ ಮತ್ತು ಕಾಂಪೌಂಡ್ ನಿರ್ಮಿಸಲು ಬಂದಿದ್ದಾರೆ. ಒಟ್ಟಾರೆ ಕಸದ ಪಾಯಿಂಟ್ನ್ನು ಶಾಶ್ವತ ಗೊಳಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ಯಾವುದೇ ಕಾರಣಕ್ಕೂ ಇಲ್ಲಿ ಕಸದ ಗಾಡಿ ನಿಲ್ದಾಣ ಮಾಡಲು ಬಿಡುವುದಿಲ್ಲ ಎಂದು ಪಟ್ಟುಹಿಡಿದರು.
ಸ್ಥಳಕ್ಕಾಗಮಿಸಿದ ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಕಸದ ವಾಹನಗಳ ನಿಲುಗಡೆ ಸ್ಥಳ, ಕಾಂಪೌಂಡ್ ಮಾತ್ರ ನಿರ್ಮಿಸಲಿದ್ದೇವೆ ಎಂದು ಮನವರಿಕೆ ಮಾಡಿದರೂ ಪ್ರತಿಭಟನಾಕಾರರು ಬಗ್ಗಲಿಲ್ಲ. ಸ್ಥಳಕ್ಕೆ ಆಗಮಿಸಿದ ಬಿಜೆಪಿ ಮುಖಂಡ ಮಧುಕುಮಾರರಾಜ್ ಅರಸ್ ಮತ್ತು ನಗರಸಭಾಧ್ಯಕ್ಷ ವರಸಿದ್ದಿವೇಣುಗೋಪಾಲ್ ಅವರ ಮಧ್ಯೆ ಅವಾಚ್ಯಪದಗಳಿಂದ ಜಟಾಪಟಿ ನಡೆಯಿತು.
ಪರಸ್ಪರ ಕೈಕೈ ಮಿಲಾಹಿಸುವ ಹಂತಕ್ಕೂ ಪರಿಸ್ಥಿತಿ ಹೋಗಿತ್ತು. ಈ ಹಂತದಲ್ಲಿ ಸ್ಥಳೀಯರು ಇಬ್ಬರನ್ನೂ ಸಮಾಧಾನಪಡಿಸಿದರು.ಈ ಸಂದರ್ಭದಲ್ಲಿ ಸುಜಾತ, ಮಂಜುನಾಥ್, ಅರುಣ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
Protest against the municipal council by the vice president of the municipal council