ಚಿಕ್ಕಮಗಳೂರು: ಆರೋಗ್ಯವಾಗಿ ಸದೃಢವಾಗಿದ್ದು, ಚೈತನ್ಯವಾಗಿದ್ದೇನೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನಾಗಿಸಿದರೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಮೂಲಕ ಪ್ರಬಲ ಪೈಪೋಟಿ ನೀಡುವುದಾಗಿ ಮಾಜಿ ಕೇಂದ್ರ ಸಚಿವೆ ಡಿ.ಕೆ ತಾರಾದೇವಿ ಸಿದ್ಧಾರ್ಥ ಸ್ಪಷ್ಟಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ತಾರಾದೇವಿಗೆ ವಯಸ್ಸಾಗಿದೆ. ಆರೋಗ್ಯ ಸರಿ ಇಲ್ಲ. ಚುನಾವಣೆ ಸ್ಪರ್ಧಿಸಲು ಅಶಕ್ತರಾಗಿದ್ದಾರೆಂದು ಕೆಲವರು ಪಿತೂರಿ ಮಾಡಿ ನನ್ನ ವರ್ಚಸ್ಸು ಕುಂದಿಸುವ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು.
೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಅನೇಕ ಅಭಿಮಾನಿಗಳು, ಸಮಾನ ಮನಸ್ಕರೂ ಕಳೆದ ಎರಡು ತಿಂಗಳಿನಿಂದ ತಂಡವಾಗಿ ಶೃಂಗೇರಿ, ತರೀಕೆರೆ, ಮೂಡಿಗೆರೆ, ಚಿಕ್ಕಮಗಳೂರು ಕ್ಷೇತ್ರದಾದ್ಯಂತ ತಮ್ಮ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವಂತೆ ಶಾಸಕರುಗಳ ಸಹಿತ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆಂದು ಹೇಳಿದರು.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ತಮಗೆ ತುಂಬಾ ಪರಿಚಯ ಇರುವ ಕ್ಷೇತ್ರವಾಗಿದ್ದು ಎರಡೂ ಜಿಲ್ಲೆಗಳಲ್ಲಿ ತಮ್ಮ ಪರವಾಗಿ ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಈ ಚುನಾವಣೆಯಲ್ಲಿ ಗೆಲ್ಲುವ ನಂಬಿಕೆ ಇದೆ ಎಂದು ತಿಳಿಸಿದರು.
ತಾವು ಕೆಳ ಹಂತದ ರಾಜಕಾರಣದಿಂದ ಎಂಪಿ ಸ್ಥಾನದವರೆಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಆರೋಗ್ಯ ಸರಿಯಿಲ್ಲದವರಿಗೆ ಸ್ಪಂದಿಸುವುದು, ಮಹಿಳೆ ಮತ್ತು ಯುವಕರ ಸಬಲೀಕರಣಕ್ಕೆ ಉತ್ತಮ ಕಾರ್ಯಕ್ರಮ ಪರಿಸರ ಸಂರಕ್ಷಣೆಗೆ ಒತ್ತು ನೀಡಿ, ವಿವಿಧ ಕ್ಷೇತ್ರಗಳಲ್ಲಿ ಉತ್ತಮವಾದ ಜನಪರ ಕಾರ್ಯಕ್ರಮ ರೂಪಿಸಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದ ತಾರಾದೇವಿ ನನ್ನ ಕೊನೆ ಉಸಿರಿರುವ ತನಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Former Union Minister DK Taradevi Siddhartha press conference