ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನಕ್ಕೆ ಗೌರವ ಕೊಟ್ಟೇ ಗೊತ್ತಿಲ್ಲ. ಆದರೂ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂವಿಧಾನ ಜಾಗೃತಿ ದಿನ ಆಚರಿಸುತ್ತಿದೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.
ಅವರು ಶನಿವಾರ ನಗರದ ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಲ್ಲಿ ಪಕ್ಷದ ಲೋಕಸಭಾ ಚುನಾವಣಾ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಅಂಬೇಡ್ಕರ್ ಅವರ ಫೋಟೋ ಮುಂದಿಟ್ಟುಕೊಂಡು ವಶೀಕರಣದ ದಂಡ ಹಿಡಿದುಕೊಂಡು ಬಂದಿರುವ ಕಾಂಗ್ರೆಸಿಗರಿಂದ ಮೋಸ ಹೋಗದಂತೆ ಜನರನ್ನು ಎಚ್ಚರಿಸುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ. ಕಾಂಗ್ರೆಸ್ನ ಈ ದುಷ್ಠ ಷಡ್ಯಂತ್ರ ಊರೊಳಗೆ ಬರದಂತೆ ನೋಡಿಕೊಳ್ಳಬೇಕು ಎಂದರು.
ಆರ್ಟಿಕಲ್ ೩೭೦ ರದ್ದು ಪಡಿಸುವವರೆಗೆ ಸಂವಿಧಾನದ ಪ್ರಕಾರ ಸಿಗಬೇಕಾದ ಮೀಸಲಾತಿ ಕಾಶ್ಮೀರಕ್ಕೆ ಸಿಗುತ್ತಿರಲಿಲ್ಲ. ಅಲ್ಲಿರುವ ದಲಿತರಿಗೆ ಆರ್ಟಿಕಲ್ ೩೭೦ ರದ್ದುಪಡಿಸಿದ ಮೇಲೆಯೇ ಮೀಸಲಾತಿ ಲಾಭ ಸಿಕ್ಕಿದ್ದು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಬದುಕಿದ್ದಾಗಲೂ ಅಪಮಾನ ಮಾಡಿ, ಸತ್ತಾಗಲೂ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ. ಇಂದು ಅಂಬೇಡ್ಕರ್ ಹೆಸರಲ್ಲಿ ವಶೀಕರಣ ಮಾಡಲು ಹೊರಟಿದೆ ಎಂದರು.
ಅಂಬೇಡ್ಕರ್ ಅವರ ವಿಚಾರವನ್ನು ಇಟ್ಟುಕೊಂಡಿರುವುದು ಬಿಜೆಪಿ ಆದರೆ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರ ಫೋಟೋವನ್ನು ಮಾತ್ರ ಮುಂದಿಟ್ಟುಕೊಂಡು ಮಂತ್ರವಾದಿಗಳಂತೆ ವಶೀಕರಣ ಮಾಡಲು ಹೊರಟಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲೇ ಪ್ರಜಾ ಪ್ರಭುತ್ವ ಇಲ್ಲ. ಇನ್ನು ಆ ಪಕ್ಷಕ್ಕೆ ಪ್ರಜಾ ಪ್ರಭುತ್ವದ ಬಗ್ಗೆ ನಂಬಿಕೆ ಇರಲು ಸಾಧ್ಯವೇ ಇಲ್ಲ. ಅಲ್ಲಿ ನೆಹರೂ ಇಂದ ರಾಹುಲ್ ಗಾಂಧಿ ವರೆಗೆ ಕೇಲವ ವಂಶ ಪಾರಂಪರ್ಯ ಮಾತ್ರ ಎಂದು ದೂರಿದರು.
ಮೀಸಲಾತಿಯನ್ನು ಬಲವಾಗಿ ಪ್ರತಿಪಾದಿಸಿದವರು ಅಂಬೇಡ್ಕರ್ ಅವರು. ಆದರೆ ಮೀಸಲಾತಿ ಬೇಡ ಎಂದು ಪತ್ರ ಬರೆದವರು ಮೊದಲ ಪ್ರಧಾನಿ ಜವಹರಲಾಲ್ ನೆಹರು. ಹೀಗಿದ್ದಾಗ ಸಂವಿಧಾನದ ಬಗ್ಗೆ ಮೊದಲು ಜಾಗೃತಿ ಮೂಡಿಸಿಕೊಳ್ಳಬೇಕಿರುವುದು ಕಾಂಗ್ರೆಸಿಗರು ಎಂದು ಟೀಕಿಸಿದರು.
ಅತೀ ಹೆಚ್ಚುಬಾರಿ ರಾಜ್ಯ ಸರ್ಕಾರಗಳನ್ನು ಕಲಂ ೩೫೬ ಬಳಸಿ ವಜಾ ಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಅವರಿಗೆ ಸಂವಿಧಾನದ ಬಗ್ಗೆ ಜಾಗೃತಿ ಇದ್ದಿದ್ದರೆ ರಾಜಕೀಯ ಕಾರಣಕ್ಕೆ ಸರ್ಕಾರಗಳನ್ನ ವಜಾ ಗೊಳಿಸುತ್ತಿರಲಿಲ್ಲ ಎಂದರು.
ಬಡವರಿಗೆ ಬಲ ಕೊಡುವುದು ನಮ್ಮ ನೀತಿ, ಬಡವರನ್ನು ಉಪಯೋಗಿಸಿಕೊಂಡು ರಾಜಕಾರಣ ಮಾಡುವುದು ಕಾಂಗ್ರೆಸ್ ನೀತಿ. ಬಡವ ಬಡವನಾಗೇ ಇರಬೇಕು. ಅವನು ಬೇಡುತ್ತಲೇ ಇರಬೇಕು. ಆಗ ಅಲ್ಲಿ ಯಾರದ್ದೋ ಕಿತ್ತು. ಇಲ್ಲಿ ಕೊಟ್ಟು ನಾನು ಕೊಟ್ಟೆ ಎಂದು ಹೇಳಿಕೊಳ್ಳುವುದು ಕಾಂಗ್ರೆಸ್ ನೀತಿ. ಬಡವನಿಗೆ ಬಲ ಕೊಟ್ಟು ಅವರನ್ನು ಸ್ವಾವಲಂಬಿ ಮಾಡುವುದು ನರೇಂದ್ರ ಮೋದಿ ಅವರ ನೀತಿ ಎಂದು ತಿಳಿಸಿದರು.
ನಮ್ಮ ನೀತಿ, ನೇತ ಮತ್ತು ನಿಯ್ಯತ್ತು ಮೂರು ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಜಾತಿ, ಅಧಿಕಾರ ಮೊದಲಲ್ಲ. ದೇಶ ಮೊದಲು ಎನ್ನುವುದು ನಮ್ಮ ನೀತಿ. ಇಂದಿನ ವರೆಗೆ ಈ ತತ್ವದ ಜೊತೆಗೆ ಬಿಜೆಪಿ ರಾಜಿಯನ್ನೇ ಮಾಡಿಕೊಂಡಿಲ್ಲ. ರಾಜಿ ಮಾಡಿಕೊಂಡಿದ್ದರೆ ಅಧಿಕಾರ ಹಿಡಿಯಬಹುದಿತ್ತು. ಆದರೆ ದೇಶ ಉಳಿಸಿಕೊಳ್ಳಲು ಆಗುತ್ತಿರಲಿಲ್ಲ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ, ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಮಾಜಿ ಶಾಸಕರುಗಳಾದ ಡಿ.ಎಸ್.ಸುರೇಶ್, ಡಿ.ಎನ್.ಜೀವರಾಜ್, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿ ಪ್ರೇಂಕುಮಾರ್ ಇತರರು ಭಾಗವಹಿಸಿದ್ದರು.
I don’t know if the Congress party respects the constitution