ಚಿಕ್ಕಮಗಳೂರು: ಮಹಾ ಪುರಷರ ವಿಚಾರಧಾರೆಗಳನ್ನು ಜೋಡಿಸಿಕೊಂಡು ಹೋಗುವುದು ಸಮ ಸಮಾಜ ನಿರ್ಮಾಣದ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಅವರು ಭಾನುವಾರ ತಾಲ್ಲೂಕಿನ ಹಿರೇಗೌಜ ಗ್ರಾಮದಲ್ಲಿ ೨೦ ಲಕ್ಷ ರೂ. ವೆಚ್ಚದ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಬಸವಣ್ಣನವರು, ಕನಕದಾಸರು, ಅಂಬೇಡ್ಕರ್ ಎಲ್ಲರೂ ಸಮ ಸಮಾಜದ ನಿರ್ಮಾಣ, ಶೋಷಿತರನ್ನು ಸಮಾಜದ ಮುನ್ನೆಲೆಗೆ ತರಬೇಕು ಎಂದು ಹೋರಾಟ ಮಾಡಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಣ್ಣ ಅವರನ್ನು ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸಿದ್ದಾರೆ.
ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ೭೫ ವರ್ಷಗಳಾದವು. ಅದರ ನೆನಪಿಗಾಗಿ ಸಂವಿಧಾನ ಜಾಗೃತಿ ಜಾಥಾವನ್ನು ಮಾಡುತ್ತಿರುವುದು ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದ್ದು, ನುಡಿದಂತೆ ನಡೆಯುವ ಸರ್ಕಾರ ನಮ್ಮದಾಗಿದೆ ಎಂದರು.
ಸಾಂಸ್ಕೃತಿಕ ಭವನಕ್ಕೆ ಅಗತ್ಯವಿರುವ ಹೆಚ್ಚುವರಿ ಅನುದಾನವನ್ನು ಬಿಡುಗಡೆ ಮಾಡುತ್ತೇವೆ. ಹಿರೇಗೌಜ ಗ್ರಾಮದ ಸಿದ್ದೇಶ್ವರ ದೇವಸ್ಥಾನದ ದಾರಿಗೆ ಈಗಾಗಲೇ ೨.೫೦ ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ. ಸಧ್ಯದಲ್ಲೇ ಕೆಲಸ ಆರಂಭವಾಗಲಿದೆ ಎಂದರು.
ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ತಮ್ಮಲ್ಲಿರುವ ಪ್ರತಿಭೆ ಅನಾವರಣಕ್ಕೆ ಈ ಸಾಂಸ್ಕೃತಿಕ ಭವನ ವೇದಿಕೆಯಾಗಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಮಂಜುಳಾಗುರುಲಿಂಗಪ್ಪ, ಸದಸ್ಯ ಶಿವಕುಮಾರ್, ಗುರುಮೂರ್ತಿ, ಗ್ರಾಮಸ್ಥರು ಉಪಸ್ಥಿತರಿದ್ದರು.
20 lakhs in Hiregauja village. Kuddali Puja for the cost cultural building construction work