ಚಿಕ್ಕಮಗಳೂರು: ಎಲ್ಲಾ ಸಾಹಿತ್ಯಗಳ ಮೂಲಬೇರು ಜಾನಪದ ಸಾಹಿತ್ಯ. ಎಲ್ಲಾ ಸಾಮಾಜಿಕ ನಾಗರಿಕತೆಗಳ ಸಂಸ್ಕೃತಿಗಳ ತಾಯಿ ಬೇರು ಗ್ರಾಮೀಣ ಸಂಸ್ಕೃತಿ, ಅದೇ ರೀತಿ ಭಾರತೀಯ ಸಂಸ್ಕೃತಿಯ ತಾಯಿ ಬೇರು ಜಾನಪದ ಸಂಸ್ಕೃತಿ ಹಾಗಾಗಿ ಒಂದು ಬಿಟ್ಟು ಮತ್ತೊಂದು ಇರಲಾರವು ಇವುಗಳ ನಡುವೆ ಬಿಡಿಸಲಾರದ ಸಂಬಂಧವಿದೆ ಎಂದು ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತು ಚಿಕ್ಕಮಗಳೂರು ಜಿಲ್ಲೆ ಹಾಗೂ ರಾಮೇಶ್ವರ ವೀರಗಾಸೆ ಕಲಾ ಸೇವಾ ಸಂಘ ಸಂಯುಕ್ತಾಶ್ರಯದಲ್ಲಿ ರಾಮದೇವರಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಜಾನಪದ ಹುಣ್ಣಿಮೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನಪದ ಸಾಹಿತ್ಯ ಮತ್ತು ಸಂ ಸ್ಕೃತಿ ಒಂದು ನಾಣ್ಯದ ಎರಡು ಮುಖಗಳಿದ್ದ ಹಾಗೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಸಂಸ್ಕೃತಿ, ಕಲೆ, ಸಂಗೀತ, ಸಾಹಿತ್ಯದ ಮೂಲವನ್ನು ಹೇಳಲು ಹೊರಟರೆ, ಹಿಂದಿನ ಕಾಲದಲ್ಲಿ ನಮ್ಮ ಜನಪದರು ತಮ್ಮ ಬದುಕಿನ ಸೂತ್ರ, ಶ್ರಮದ ದುಡಿಮೆಯೇ ಎಂದು ತಿಳಿದಿದ್ದರು. ಶ್ರಮ ಮತ್ತು ದಣಿವನ್ನು ನಿವಾರಿಸಿಕೊಳ್ಳಲು ಜನಪದ ಹಾಡು, ನೃತ್ಯ,, ಗಾದೆ, ಒಗಟು, ಸೋಬಾನೆ, ಲಾವಣಿ ಮುಂತಾದ ಕಲಾ ಪ್ರಕಾರಗಳನ್ನು ಗದ್ದೆ ನಾಟಿ ಮಾಡುವಾಗ, ಒಕ್ಕಣೆ, ಕಳೆ ಕೀಳುವಾಗ, ಬಿತ್ತುವಾಗ, ಕೇರುವಾಗ, ಬೀಸುವಾಗ ಹೀಗೆ ನಾನಾ ತರದ ಕೆಲಸ ಮಾಡುವಾಗ ಮನೋರಂಜನೆಗಾಗಿ ಇವುಗಳನ್ನು ಬಳಸಿಕೊಂಡರು ಎಂದು ತಿಳಿಸಿದರು.
ಈ ಎಲ್ಲಾ ಕಲೆಗಳ ಹಿಂದೆ ಮೌಖಿಕ ರೂಪದಲ್ಲಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ, ನೈತಿಕವಾಗಿ ಬದುಕಲು ಮೌಲ್ಯಧಾರಿತ ಅರ್ಥಕೊಟ್ಟರು. ಈ ಸಾಮಾಜಿಕ ಮೌಲ್ಯಗಳೇ ಜನಪದ ಸಾಹಿತ್ಯದಲ್ಲಿ ಬಹಳಷ್ಟು ಅಡಗಿವೆ. ಶ್ರಮಪಟ್ಟು ದುಡಿಮೆ ಮಾಡುವುದು, ಕಾಯಕವೇ ಕೈಲಾಸ, ಹಾಸಿಗೆ ಇದ್ದಷ್ಟು ಕಾಲು ಚಾಚು, ಆಳಾಗಿ ದುಡಿ ಅರಸನಾಗಿ ಉಣ್ಣು, ಕೂತು ತಿಂದರೆ ಕುಡಿಕೆ ಹೊನ್ನು ಸಾಲದು, ಬದುಕು ಇತರರನ್ನು ಬದುಕಲು ಬಿಡು, ಎನ್ನುವಂತಹ ಜನಪದ ಸಾಹಿತ್ಯದ ಗಾದೆ ಮಾತುಗಳು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಉದಾಹರಣೆ ಗಳಾಗಿವೆ ಎಂದು ಹೇಳಿದರು.
ಪ್ರೀತಿ, ವಿಶ್ವಾಸ, ಸಹನೆ, ಅಂತಃಕರಣ, ಹೊಂದಾಣಿಕೆ ಧಾರ್ಮಿಕ ಸಹಿಷ್ಣತೆ, ಸಹಕಾರ ಮನೋಭಾವ ಮೂಲಕ ಬದುಕಿಗೊಂದು ಅರ್ಥ ಕೊಡಲು ಮೊದಲು ಪ್ರಯತ್ನಿಸಿದ್ದು ಜಾನಪದ ಸಾಹಿತ್ಯ. ಸಾಮಾನ್ಯವಾಗಿ ಎಲ್ಲಾ ಕವಿಪುಂಗವರು, ಸಾಹಿತಿಗಳು, ಲೇಖಕರು ಜನಪದ ಸಾಹಿತ್ಯದ ತಳಹದಿಯ ಆಧಾರದ ಮೇಲೆಯೇ ಶಿಷ್ಟ ಸಾಹಿತ್ಯದ ರೂಪಕೊಟ್ಟರು ಎಂದು ಹೇಳಬಹುದು ಹಾಗಾಗಿ ಜನಪದ ಸಾಹಿತ್ಯ ಸಂಗೀತ ಸಂಸ್ಕೃತಿಯನ್ನು ಎಂದೆಂ ದಿಗೂ ನಾವು ಮರೆಯಬಾರದು ಎಂದು ತಿಳಿಸಿದರು.
ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಳೇಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ಇಂದು ನಮ್ಮ ಭಾರತೀಯ ಸಂಸ್ಕೃತಿ ಹೆಮ್ಮರವಾಗಿ ಬೆಳೆದು ಜಗತ್ಪ್ರಸಿದ್ಧಿ ಆಗಲು ಹಳೇ ಬೇರಾದ ನಮ್ಮ ಜನಪದ ಸಂಸ್ಕೃ ತಿಯೇ ಮೂಲ ಕಾರಣ ಎಂದರು.
ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ, ಧಾರ್ಮಿಕವಾಗಿ ವಿವಿಧತೆಯಲ್ಲಿ ಏಕತೆಯನ್ನು ಸಾಧಿಸಲು ಜನಪದ ಸಾಹಿತ್ಯವೇ ಮೂಲ ಪ್ರೇರಣೆಯಾಗಿದೆ, ಹಾಗಾಗಿ ಪಾಶ್ಚ್ಯಾತ್ಯ ಸಂಸ್ಕೃತಿಯ ಗುಂಗಿಗೆ ಒಳಗಾಗಿ ಯಾಂತ್ರಿಕ ಬದುಕನ್ನು ಸಾಗಿಸಲು ಹೊರಟಿರುವ ಇಂದಿನ ಯುವ ಪೀಳಿಗೆಗೆ ಜನಪದ ಸಂಸ್ಕೃತಿ ಸಾಹಿತ್ಯ ಸಂಗೀತದ ಪ್ರಾಮುಖ್ಯತೆಯನ್ನು ತಿಳಿಸಲು ಪ್ರತಿ ಪಟ್ಟಣ, ಊರುಗಳಲ್ಲಿ ಇಂತಹ ಜಾನಪದ ಸಾಹಿತ್ಯ ಹುಣ್ಣಿಮೆ ಸಂಭ್ರಮ ದಂತಹ ಅರ್ಥಗರ್ಭಿತ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಮೇಶ್ವರ ವೀರಗಾಸೆ ಕಲಾ ಸೇವಾ ಸಂಘದ ಅಧ್ಯಕ್ಷ ಆರ್.ಎಂ.ರುದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಸಮಾರಂಭದಲ್ಲಿ ಹಿರಿಯ ವೀರಗಾಸೆ ಕಲಾವಿದ ಆರ್.ಎಚ್.ಅನಂತಗೌಡ, ಶಿಕ್ಷಕ ವಿಶ್ವನಾಥ್, ಮತ್ತು ಆರ್.ಬಿ.ಚಂದ್ರೇಗೌಡ, ಚಿಕ್ಕೇಗೌಡ, ಮಲ್ಲೇಶಪ್ಪ, ದಯಾನಂದ ಸೇರಿದಂತೆ ಅನೇಕರು ಇದ್ದರು.
Folk full moon celebration program