ಚಿಕ್ಕಮಗಳೂರು: ಕನಿಷ್ಠ ದೇವಾಲಯಗಳಿಗೆ ಹೋದಾಗ ಜನರಲ್ಲಿ ಸಂಸ್ಕಾರ ಪ್ರಜ್ಞೆ ಬರಬೇಕೆಂಬುದು ದೇವಾಲಯಗಳ ನಿರ್ಮಾಣದ ಉದ್ದೇಶ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ಸಖರಾಯಪಟ್ಟಣ ಹೋಬಳಿ ಬಾಣೂರು ಗ್ರಾಮದಲ್ಲಿ ಸಣ್ಣಕ್ಕಿ ವಂಶಸ್ಥರು ನೂತನವಾಗಿ ನಿರ್ಮಿಸಲಾಗಿರುವ ಶ್ರಿ ಗವಿರಂಗನಾಥಸ್ವಾಮಿ ದೇವಾಲಯದ ಪ್ರಾರಂಭೋತ್ಸವವನ್ನು ನೆರವೇರಿಸಿ ಮಾತನಾಡಿದರು.
ದೇವಾಲಯದ ಗರ್ಭಗುಡಿ ಒಳಗೆ ತೆಗೆದುಕೊಂಡು ಹೋದ ನೀರು ಹೊರಬರುವಾಗ ತೀರ್ಥವಾಗುತ್ತದೆ. ಹಣ್ಣು-ಕಾಯಿ ಪ್ರಸಾದವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಉತ್ತಮ ಸಂಸ್ಕಾರವಂತ ಪ್ರಜೆಗಳಾಗಬೇಕೆಂಬುದು ನನ್ನ ಆಶಯ ಎಂದು ಹೇಳಿದರು.
ಯಾವುದೇ ಗ್ರಾಮದಲ್ಲಿ ದೇವಾಲಯ ಜೀರ್ಣೋದ್ಧಾರ, ನೂತನ ದೇವಸ್ಥಾನ ಪ್ರಾರಂಭೋತ್ಸವ ಮಾಡುವುದು ಎಷ್ಟು ಮುಖ್ಯವೋ ಪ್ರತಿನಿತ್ಯ ಪೂಜೆ ಸಲ್ಲಿಸುವುದು ಅಷ್ಟೇ ಮುಖ್ಯ ಎಂದು ಅವರು ಹೇಳಿದರು.
ಈಗಾಗಲೇ ಹಲವಾರು ದೇವಾಲಯಗಳ ನಿರ್ಮಾಣ ಮಾಡಿರುವುದು, ಪ್ರಾರಂಭೋತ್ಸವ ನೋಡಿದ್ದೇವೆ. ನಿತ್ಯ ಪೂಜೆ ಇಲ್ಲದೆ ದೇವಾಲಯಗಳು ಬಿಕೋ ಎನ್ನುತ್ತಿವೆ. ಅದಕ್ಕಾಗಿ ಸುವ್ಯವಸ್ಥಿತವಾದ ಪೂಜೆ ಕೈಂಕರ್ಯಗಳನ್ನು ಗ್ರಾಮಸ್ಥರು ಮಾಡುವ ಮೂಲಕ ಭಕ್ತಿ ಪ್ರಧಾನವಾಗಬೇಕು. ಶ್ರೀ ಗವಿರಂಗನಾಥ ಸ್ವಾಮಿ ಆಶೀರ್ವಾದ ಬಾಣೂರಿಗೆ ಸೀಮಿತವಾಗದೆ ಈ ಭಾಗದ ಎಲ್ಲರಿಗೂ ದೊರೆಯುವಂತಾಗಲಿ ಎಂದು ಹಾರೈಸಿದರು.
ಬುದ್ಧ, ಬಸವ, ಕನಕದಾಸ, ಅಂಬೇಡ್ಕರ್ ಪ್ರತಿಪಾದನೆ ಮಾಡಿದ ಪರಿಣಾಮ ಸಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿ, ಇಂದು ನಾವೆಲ್ಲರೂ ಅಧಿಕಾರದಲ್ಲಿದ್ದೇವೆಂದರೆ ಅವರುಗಳು ಹಾಕಿ ಕೊಟ್ಟಿರುವ ಮಾರ್ಗದರ್ಶನದಿಂದ ಸಮಾನತೆ ಕಾಣಬಹುದಾಗಿದೆ. ಈ ಹಿನ್ನೆಲೆಯಲ್ಲಿ ಒಡೆದು ಹರಿದು ಹಂಚಿಹೋಗಿರುವ ಕುಟುಂಬ ವ್ಯವಸ್ಥೆ ದೇವಸ್ಥಾನದಲ್ಲಿ ಬಂದು ಪ್ರಾರ್ಥನೆ ಮಾಡುವ ಮೂಲಕ ಒಗ್ಗೂಡಬೇಕಾದ ಅಗತ್ಯ ಇದೆ ಎಂದು ಹೇಳಿದರು.
ಸಣ್ಣಕ್ಕಿ ವಂಶಸ್ಥರು ಪ್ರತಿಯೊಂದು ಸಮಾಜಕ್ಕೂ ಮಾದರಿಯಾಗಿದ್ದಾರೆ. ಇದೇ ರೀತಿ ಸರ್ವರೂ ಸಂಘಟಿತರಾಗಿ ಹೋರಾಟ ರೂಪಿಸಿದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಾಣಲು ಸಾಧ್ಯ ಎಂದು ತಿಳಿಸಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಗವಿರಂಗಪ್ಪ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದೆ ಎಂಬ ನಾಣ್ಣುಡಿಯಂತೆ ನಮ್ಮ ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಗವಿರಂಗನಾಥ ಸ್ವಾಮಿ ದೇವಾಲಯ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿದರು. ಗ್ರಾ.ಪಂ ಸದಸ್ಯ ರೇಣುಕಾಮೂರ್ತಿ, ಗ್ರಾಮಸ್ಥರಾದ ಈಶ್ವರಪ್ಪ, ಸಿದ್ದಪ್ಪ, ಶಾಂತಪ್ಪ, ದಯಾಶಂಕರ್ ಮತ್ತಿತರರು ಭಾಗವಹಿಸಿದ್ದರು. ಮೊದಲಿಗೆ ಸಿದ್ದಪ್ಪ ಸ್ವಾಗತಿಸಿದರು.
Inauguration of Sri Gaviranganath Swamy Temple