ಚಿಕ್ಕಮಗಳೂರು: ಮಲೆನಾಡ ಭಾಗದಲ್ಲಿ ಕಾಫಿ ಪ್ಲಾಂಟರ್ಸ್ ಗಳ ಬಹುದಿನಗಳ ಬೇಡಿಕೆಯಾಗಿದ್ದ ಕಾಫಿ ಪ್ಲಾಂಟೇಷನ್ ಲೀಸ್ ಮೇಲೆ ನೀಡುವ ಕುರಿತು ನಮ್ಮ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
ಅವರು ಭಾನುವಾರ ನಗರದ ಜಿಲ್ಲಾ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಮತ್ತು ನಾನಾ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ ಮಾತನಾಡಿ ಶೀರ್ಘದಲ್ಲಿ ಈ ಕುರಿತು ಅರ್ಜಿಗಳನ್ನು ಆಹ್ವಾನಿಸಲು ಕ್ರಮ ಕೈಗೊಳ್ಳಲಿದೆ. ಇದರಿಂದ ಕಾಫಿ ಬೆಳೆಗಾರ ಸಮುದಾಯಕ್ಕೆ ಮತ್ತು ಬಹಳಷ್ಟು ಜನರಿಗೆ ಅನುಕೂಲ ಆಗಲಿದೆ ಎಂದು, ತಜ್ಷಣ ನಿಯಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಕ್ತಿ ಯೋಜನೆಯಲ್ಲಿ ಇದುವರೆಗೂ ಒಟ್ಟು ೧ ಕೋಟಿ ೫೨ ಲಕ್ಷ ಹೆಣ್ಣು ಮಕ್ಕಳು ವಿಶೇಷ ಪ್ರಯೋಜನ ಪಡೆದಿದ್ದಾರೆ. ಈ ಬಾಬ್ತು ರೂ.೫೫ ಕೋಟಿ ೭೧ ಲಕ್ಷ ವೆಚ್ಚವಾಗಿರುತ್ತದೆ. ಅಲ್ಲದೇ ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಮತ್ತು ಪ್ರವಾಸಿ ತಾಣಗಳಿಗೆ ಬರುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿಯೂ ಗಣನೀಯವಾಗಿ ಹೆಚ್ಚಳವಾಗಿದೆ. ಈ ಮೂಲಕ ರಾಜ್ಯದ ಆರ್ಥಿಕ ಚಟುವಟಿಕೆಯೂ ಸಹ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ ಭದ್ರಾ ಉಪಕಣಿವೆಯಿಂದ ೫೬೪ ಕೆರೆಗಳಿಗೆ ನೀರುತುಂಬಿಸುವ ಮೂರು ಮತ್ತು ನಾಲ್ಕನೇ ಹಂತದ ಕಾಮಗಾರಿಗೆ ಜುಲೈ ತಿಂಗಳಿನಲ್ಲಿ ಟೆಂಡರ್ ಕರೆಯಲಾಗುವುದು ಎಂದು ಭರವಸೆ ನೀಡಿ ಈ ಯೋಜನೆಯಿಂದ ಒಂದೂವರೆ ಟಿಎಂಸಿ ನೀರು ದೊರೆಯುತ್ತಿದ್ದು, ತರೀಕೆರೆ, ಕಡೂರು ಮತ್ತು ಚಿಕ್ಕಮಗಳೂರು ತಾಲೂಕಿನ ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.
ಜಯಕಾರಹಾಕಿಸಿಕೊಳ್ಳಲು ಇಲ್ಲಿಗೆ ಬರಲಿಲ್ಲ, ಜಿಲ್ಲೆಯಲ್ಲಿ ೫ಶಾಸಕರನ್ನು ಗೆಲ್ಲಿಸಿಕೊಟ್ಟಿದ್ದಕ್ಕೆ ನಿಮ್ಮ ಋಣ ತೀರಿಸಲು ಇಲ್ಲಿಗೆ ಬಂದಿದ್ದೇನೆಂದು ಮಾತು ಆರಂಭಿಸಿದ ಅವರು, ನಿಮ್ಮ ಅಭಿಮಾನವನ್ನು ಮರೆಯುವಂತಿಲ್ಲ ೫ಕ್ಕೆ ೫ ಶಾಸಕರನ್ನು ಗೆಲ್ಲಿಸಿಕೊಡುವ ಮೂಲಕ ಇಂದಿರಾಗಾಂಧಿಯವರ ಆತ್ಮಕ್ಕೆ ಶಾಂತಿ ತಂದಿದ್ದೀರಾ, ಮರಕ್ಕೆ ಬೇರು ಹೇಗೆ ಮುಖ್ಯವೋ ಮನುಷ್ಯನಿಗೆ ನಂಬಿಕೆ ಅಷ್ಟೆ ಮುಖ್ಯ. ಬೇರೆ ಪಕ್ಷದವರು ಭಾವನೆಗಳ ಬಗ್ಗೆ ಚಿಂತಿಸಿದರೆ ನಾವುಗಳು ಜನರ ಬದುಕಿನ ಬಗ್ಗೆ ಯೋಚಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿದ್ದೇವೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೆಚ್.ಡಿ.ತಮ್ಮಯ್ಯ, ಬಸವಣ್ಣನವರನ್ನು ಸಾಂಸ್ಕೃತಿ ರಾಯಭಾರಿಯನ್ನಾಗಿ ಘೋಷಣೆ ಮಾಡಿರುವುದಕ್ಕೆ ಮುಖ್ಯಮಂತ್ರಿಗಳನ್ನು ಅಭಿನಂದಿಸುತ್ತೇನೆ.ಚಿಕ್ಕಮಗಳೂರು ತಾಲೂಕಿನಲ್ಲಿ ೧೯೮ ಕೆರೆಗಳನ್ನು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ೧ ಮತ್ತು ೨ನೇ ಹಂತದ ಕಾಮಗಾರಿ ಮುಗಿದಿದೆ. ೩ ಮತ್ತು ೪ನೇ ಹಂತದ ಕೆಲಸಕ್ಕೆ ಟೆಂಡರ್ ಕರೆಯಬೇಕೆಂದು ಮನವಿ ಮಾಡಿದರು.
ಶಾಸಕಿ ನಯನಮೋಟಮ್ಮ ಮಾತನಾಡಿ, ವಿರೋಧ ಪಕ್ಷದವರು ಗ್ಯಾರಂಟಿ ಅನುಷ್ಟಾನ ಅಸಾಧ್ಯವೆಂದಿದ್ದರು. ಅದನ್ನು ಕಾಂಗ್ರೆಸ್ ಸರ್ಕಾರ ಸಾಧ್ಯವನ್ನಾಗಿಸಿದೆ. ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದು ಟೀಕಿಸಿದ್ದರು. ಆದರೆ, ಬಿಜೆಪಿಯವರು ಖಾಲಿಮಾಡಿದ್ದ ಖಜಾನೆಯನ್ನು ತುಂಬಿಸಿ ಅಭಿವೃದ್ಧಿ ಕೆಲಸಗಳಿಗೆ ಮುಖ್ಯಮಂತ್ರಿಗಳ ಹಣ ನೀಡುತ್ತಿದ್ದಾರೆ. ೫ ವರ್ಷಗಳ ಕಾಲ ಗ್ಯಾರಂಟಿ ಮುಂದುವರೆಯಲಿದೆ ಎಂದು ಹೇಳಿದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಕೇಸರಿ ರಂಗೇರಿತ್ತು. ಅದನ್ನು ಕಾಂಗ್ರೆಸ್ ಪಕ್ಷ ಕೇಸರಿಮಯವನ್ನು ಅಳಿಸಿಹಾಕಿದೆ. ಗ್ಯಾರಂಟಿಗಳನ್ನು ಪ್ರತಿಮನೆಗೆ ತಲುಪಿಸಿದ್ದರಿಂದ ಜಿಲ್ಲೆಯಲ್ಲಿ ೫ ಶಾಸಕರು ಆಯ್ಕೆಯಾಗಲು ಸಾಧ್ಯವಾಗಿದೆ. ಹೆಚ್ಚು ಸಲ ಬಜೆಟ್ ಮಂಡಿಸುವ ಮೂಲಕ ಉತ್ತಮ ಆರ್ಥಿಕ ತಜ್ಞ ಎಂಬುದನ್ನು ಸಿದ್ದರಾಮಯ್ಯನವರು ಸಾಬೀತುಪಡಿಸಿದ್ದಾರೆಂದು ಹೇಳಿದರು.
ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ ಮಾತನಾಡಿ, ಕಾಂಗ್ರೆಸ್ ಸರ್ಕಾರ ಸಮಸಮಾಜ ನಿರ್ಮಾಣಕ್ಕೆ ಚಿಂತನೆ ನಡೆಸಿದೆ. ಬಿಜೆಪಿಯವರಲ್ಲೆ ಗೋಬ್ಯಾಕ್ ಶೋಭಾ ಅಭಿಯಾನ ಆರಂಭವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆಂದು ತಿಳಿಸಿದರು.
ಶಾಸಕ ಮತ್ತು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ, ಶೃಂಗೇರಿ ಕ್ಷೇತ್ರದಲ್ಲಿ ಗ್ಯಾರಂಟಿಗಳನ್ನು ಸರ್ಕಾ ನೀಡಿರುವ ಅನುದಾನದ ಮಾಹಿತಿಯನ್ನು ನೀಡಿದರು.ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಕೋನರೆಡ್ಡಿ, ರಾಜ್ಯಸಭಾ ಮಾಜಿ ಸದಸ್ಯ ಹನುಮಂತಯ್ಯ, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರಾದ ಡಾ.ಅಂಶುಮಂತ್, ಬಿ.ಹೆಚ್.ಹರೀಶ್, ಶ್ರೀನಿವಾಸ, ಕಂದಾಯ ಇಲಾಖೆ ಪ್ರಧಾನಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ, ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ವಿಕ್ರಮ್ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ,ಕನಕರೆಡ್ಡಿ ಇದ್ದರು.
Government has decided on coffee plantation lease