ಚಿಕ್ಕಮಗಳೂರು: ಸಮಾಜದ ಮುನ್ನಲೆಗೆ ಕಾರ್ಮಿಕರನ್ನು ತರಬೇಕೆಂಬ ಉದ್ದೇಶದಿಂದ ಸರ್ಕಾರದ ಆಶಯವಾಗಿದ್ದು, ಸಮ ಸಮಾಜದ ನಿರ್ಮಾಣಕ್ಕೆ ನಾಂದಿಯಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇಂದು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಕಾರ್ಮಿಕ ಇಲಾಖೆ ಇವರ ಸಹಯೋಗದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ನೊಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದರು.
ಕಟ್ಟಡ ಕಾರ್ಮಿಕರ ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿದ್ದು ಸರ್ಕಾರದ ಈ ಸೌಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಕಾರ್ಮಿಕರ ಮಕ್ಕಳು ಗುರಿ ಮುಟ್ಟಿ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಗಲಿ ಎಂದು ಹಾರೈಸಿದರು.
ಕಟ್ಟಡ ಕಾರ್ಮಿಕರ ಕಷ್ಟವನ್ನು ಅರಿತು ಸರ್ಕಾರ ಕಾರ್ಮಿಕರ ಕಲ್ಯಾಣ ನಿಧಿ, ಮಂಡಳಿ ಸ್ಥಾಪನೆ ಮಾಡಿ, ಕಾರ್ಮಿಕರ ಮಕ್ಕಳು ಅವರ ಪೋಷಕರಂತೆ ಕಾರ್ಮಿಕರಾಗಬಾರದು ಎಂಬ ದೃಷ್ಟಿಯಿಂದ ವಿದ್ಯಾವಂತರಾಗಿ ಸಮಾಜದಲ್ಲಿ ಮುಂದೆ ಬರಬೇಕೆಂಬ ಉದ್ದೇಶದಿಂದ ಉಚಿತ ಲ್ಯಾಪ್ಟಾಪ್ ವಿತರಣೆ ಮಾಡುತ್ತಿರುವುದು ಅಭಿನಂದನಾರ್ಹ ಎಂದರು.
೧೨ನೇ ಶತಮಾನದಲ್ಲಿಯೇ ಜಗಜ್ಯೋತಿ ಬಸವಣ್ಣನವರು ಕ್ರಾಂತಿಕಾರಿ ಬದಲಾವಣೆಗಳನ್ನು ತರಬೇಕೆಂಬ ದೃಷ್ಟಿಯಿಂದ ಸಮಾಜದ ಎಲ್ಲಾ ಶೋಷಿತರೂ, ಬಡವರೂ ಸಮಾಜದ ಮುನ್ನಲೆಗೆ ಬರಬೇಕೆಂಬ ಉದ್ದೇಶದಿಂದ ಕಾಯಕವೇ ಕೈಲಾಸ ಎಂದು ಹೇಳಿದ್ದಾರೆ ಎಂದು ಬಣ್ಣಿಸಿದರು.
೧೯ನೇ ಶತಮಾನದಲ್ಲಿ ಸುಮಾರು ೭೫ ವರ್ಷಗಳ ಹಿಂದೆ ಭಾರತ ರತ್ನ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಮ ಸಮಾಜ ನಿರ್ಮಾಣಕ್ಕಾಗಿ ಶೋಷಿತರಿಗೆ ಧ್ವನಿ ನೀಡಬೇಕೆಂಬ ಹಿನ್ನೆಲೆಯಲ್ಲಿ ಸಂವಿಧಾನ ರಚನೆ ಮಾಡಿ, ನ್ಯಾಯ ಒದಗಿಸಿದ್ದಾರೆಂದು ಶ್ಲಾಘಿಸಿದರು.
ಸರ್ಕಾರ ನುಡಿದಂತೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡ ಕುಟುಂಬದ ಮಕ್ಕಳಿಗಾಗಿ ಈ ರೀತಿಯ ಹಲವು ಉಚಿತ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಜೊತೆಗೆ ಮಹಿಳೆಯರು ಆರ್ಥಿಕ ಸಬಲೀಕರಣ ಮತ್ತು ಸದೃಢರಾಗಬೇಕೆಂಬ ದೃಷ್ಟಿಯಿಂದ ಪ್ರತಿ ಮಹಿಳೆಗೆ ಗೃಹಲಕ್ಷ್ಮಿಯಡಿ ೨ ಸಾವಿರ ರೂ, ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್, ಅನ್ನಭಾಗ್ಯ, ಯುವನಿಧಿ ಯೋಜನೆಗಳನ್ನು ಜಾರಿಮಾಡಿ ಅನುಷ್ಠಾನಕ್ಕೆ ತಂದಿದೆ ಎಂದು ವಿವರಿಸಿದರು.
ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತ ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶೇ. ೭೫ ರಷ್ಟು ಅಸಂಘಟಿತ ಕಾರ್ಮಿಕರು ಸಾಮಾಜಿಕ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಇಎಸ್ಐ, ಪಿಂಚಣಿ, ಪಿಎಫ್, ಹೆರಿಗೆ ಭತ್ಯೆ ಸೇರಿದಂತೆ ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗಾಗಿ ೧೯೯೬ ರಲ್ಲಿ ಕೇಂದ್ರ ಸರ್ಕಾರ ಕಟ್ಟಡ ಕಾರ್ಮಿಕರ ಉದ್ಯೋಗ ಸಮೀಕರಣ ಕಾಯಿದೆಯನ್ನು ಜಾರಿಗೆ ತಂದಿತು ಎಂದು ಹೇಳಿದರು.
೨೦೦೬ ರಲ್ಲಿ ರಾಜ್ಯ ಸರ್ಕಾರ ಈ ಕಾಯಿದೆಗೆ ನಿಯಮಾವಳಿಗಳನ್ನು ರೂಪಿಸಿ, ಒಂದು ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಿತು. ಅದೇ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ಜಾರಿಗೆ ತಂದು ಈ ಮೂಲಕ ಸಾಮಾಜಿಕ ಸುರಕ್ಷತೆ ಕೊಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
೬೦ ವರ್ಷ ಮೇಲ್ಪಟ್ಟ ಕಟ್ಟಡ ಕಾರ್ಮಿಕರಿಗೆ ೩ ಸಾವಿರ ರೂ. ಪಿಂಚಣಿ ಸೌಲಭ್ಯ ಸಿಗಲಿದೆ. ಕೆಲಸ ನಿರ್ವಹಿಸುವಾಗ ದುರ್ಬಲತೆಯಾಗಿ ತೊಂದರೆಗಳಾದರೆ ತಿಂಗಳಿಗೆ ೨ ಸಾವಿರ ರೂ, ಹೆಣ್ಣುಮಕ್ಕಳಿಗೆ ಹೆರಿಗೆ ಭತ್ಯೆಯಾಗಿ ೫೦ ಸಾವಿರ ರೂ ಸಹಾಯಧನ ನೀಡಲಾಗುತ್ತಿದೆ. ಕಾರ್ಮಿಕರು ಮೃತಪಟ್ಟರೆ ಅಂತ್ಯಕ್ರಿಯೆಗೆ ೭೫ ಸಾವಿರ ರೂ, ವೈದ್ಯಕೀಯ ವೆಚ್ಚ ೧೦ ಸಾವಿರ ರೂ, ನೊಂದಾಯಿತ ಕಟ್ಟಡ ಕಾರ್ಮಿಕರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ಅಂತಹವರಿಗೆ ೫ ಲಕ್ಷ ರೂ ಪರಿಹಾರ ನೀಡಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಹೃದಯ ಶಸ್ತ್ರ ಚಿಕಿತ್ಸೆ, ಕಿಡ್ನಿ, ಕ್ಯಾನ್ಸರ್, ಪಾರ್ಶ್ವವಾಯು ಇನ್ನೂ ಮುಂತಾದ ಕಾಯಿಲೆಗಳಿಗೆ ತುತ್ತಾದ ಕಾರ್ಮಿಕರಿಗೆ ಶಸ್ತ್ರ ಚಿಕಿತ್ಸೆಗೆ ೨ ಲಕ್ಷದವರೆಗೆ ಸೌಲಭ್ಯ, ಕಾರ್ಮಿಕ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಗೆ ತಲಾ ೬೦ ಸಾವಿರ ರೂ ಸಹಾಯಧನ ನೀಡುತ್ತಿದ್ದು, ಶೈಕ್ಷಣಿಕ ಧನಸಹಾಯವನ್ನು ನೀಡಲು ಇಲಾಖೆಗೆ ಅವಕಾಶವಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಕಟ್ಟಡ ಕಾರ್ಮಿಕ ಫಲಾನುಭವಿಗಳು ಮತ್ತಿತರರು ಭಾಗವಹಿಸಿದರು.
Distribution of free laptops to children of registered construction workers studying in secondary PUC