ಕಡೂರು: ವಿಶ್ವದ ಇತರ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಸಾಹಿತ್ಯ ಮತ್ತು ಭಾಷೆ ತನ್ನದೇ ಆದ ವಿಶಿಷ್ಟವಾದ ಛಾಪನ್ನು ಮೂಡಿಸಿದೆ. ಇದರಿಂದಾಗಿ ಬದುಕನ್ನು ಉತ್ತಮವಾಗಿ ರೂಪಿಸುವ ಶಕ್ತಿ ಸಾಹಿತ್ಯಕ್ಕೆ ಇದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣಗೆರೆ ಶ್ರೀ ಕಟ್ಟೆ ಹೊಳೆಯಮ್ಮನವರ ಜಾತ್ರಾ ಮೈದಾನದ ಸಭಾ ಭವನದಲ್ಲಿ ಆಯೋಜಿಸಿದ್ದ ಪಟ್ಟಣಗೆರೆ ಗ್ರಾಮ ಪಂಚಾಯಿತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಸೇವಾ ದೀಕ್ಷಾ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಂಗವಾಗಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ನಮ್ಮ ದಿನನಿತ್ಯದ ಬದುಕಿನಲ್ಲಿ ಅಲ್ಪ ಪ್ರಮಾಣದ ಸಮಯವನ್ನು ಸಾಹಿತ್ಯ, ಸಂಗೀತ ಕಲೆ ಇವುಗಳಿಗೆ ಮೀಸಲಿಡಬೇಕು. ಮನಸ್ಸನ್ನು ಅರಳಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ತಿಳಿಸಿದರು.
ಹೆತ್ತ ತಾಯಿಯನ್ನು ಗೌರವಿಸಿದಂತೆ ಕನ್ನಡ ಭಾಷೆಯನ್ನು ಅದರ ಸಾಹಿತ್ಯವನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ ಆ ಮೂಲಕ ನಾಡಿನ ಬೆಳವಣಿಗೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರಸ್ತಾವಿಕವಾಗಿ ಜಿಲ್ಲಾ ಕ. ಸಾ. ಪ ಸಂಘಟನಾ ಕಾರ್ಯದರ್ಶಿ ಎಸ್ ಪರಮೇಶ್ವರಪ್ಪ ಮಾತನಾಡಿದರು. ಆಶಯ ನುಡಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಬಿ. ಪ್ರಕಾಶ್ ಮಾತನಾಡಿದರು.
ಉಪನ್ಯಾಸ ನೀಡಿ ಮಾತನಾಡಿದ ಕಸಬಾ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಅಧ್ಯಕ್ಷ ಕೆ. ಪಿ. ರಾಘವೇಂದ್ರ ನಮ್ಮ ಮುಂದಿನ ಪೀಳಿಗೆಗೆ ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ ನಾವು ಮಕ್ಕಳಿಗೆ ಆಸ್ತಿ ಮಾಡುವ ಬದಲಾಗಿ ಸಮಾಜಕ್ಕಾಗಿ ಮಕ್ಕಳಿಗೆ ಸಂಸ್ಕಾರ ಕೊಟ್ಟು ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಅವರು ತಿಳಿಸಿದರು.
ಪಟ್ಟಣಗೆರೆ ಗ್ರಾಮ ಪಂಚಾಯಿತಿ ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಕೆ.ಆರ್. ವೆಂಕಟೇಶ್ ಸೇವಾ ದೀಕ್ಷೆ ಸ್ವೀಕರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿಂಗಟಗೆರೆ ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ಕಸಬಾ ಹೋಬಳಿ ಸಮ್ಮೇಳನ ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮತ್ತು ಕೋಶಾಧ್ಯಕ್ಷ ವಡೇರಹಳ್ಳಿ ಅಶೋಕ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವ ಕುರಿತು ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಕಟ್ಟೆ ಹೊಳೆಯಮ್ಮನವರ ಜಾತ್ರಾ ಸಮಿತಿ ಅಧ್ಯಕ್ಷರಾದ ಹನುಮಂತಪ್ಪ ಕನ್ನಡ ಸಾಹಿತ್ಯ ಪರಿಷತ್ತಿನ ಗ್ರಾಂ. ಪಂ ಘಟಕದ ಸಂಚಾಲಕ ಕುರುಬಗೆರೆ ಲೋಕೇಶ್ ಕಾರ್ಯದರ್ಶಿ ಪಿ. ವಿ. ಓಂಕಾರ್ ಮೂರ್ತಿ, ಕುರುಬಗೆರೆ ಮಲ್ಲೇಶಪ್ಪ ಮಾತನಾಡಿದರು. ಪಟ್ಟಣಗೆರೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕುರುಬಗೆರೆ ತಿಮ್ಮಯ್ಯ ಕಾರ್ಯದರ್ಶಿ ಮಹೇಶ್ ನೀಲೇಗೌಡನಕೊಪ್ಪಲು ಕೃಷ್ಣಾನಾಯ್ಕ, ಕಟ್ಟೆ ಹೊಳೆಯಮ್ಮನವರ ಜಾತ್ರಾ ಸಮಿತಿ ಗೌಡರುಗಳು ಮತ್ತು ೧೪ ಹಳ್ಳಿ ಮುಖಂಡರುಗಳು ಸಾಹಿತ್ಯ ಪರಿಷತ್ತಿನ ಇತರ ಸದಸ್ಯರು ಉಪಸ್ಥಿತರಿದ್ದರು.
Kannada Sahitya Parishad unit service initiation and charitable lecture program