ಚಿಕ್ಕಮಗಳೂರು: ತನ್ನ ಅಲ್ಪ ಆಯಸ್ಸಿನಲ್ಲಿ ಇಡೀ ದೇಶ ಗೌರವಿಸುವಂತೆ ಬದುಕು ಸಾಗಿಸಿ, ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ವ್ಯಕ್ತಿ ಪುನೀತ್ ರಾಜ್ಕುಮಾರ್ ಆಗಿದ್ದಾರೆಂದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಅವರು ನಗರದ ಕುವೆಂಪು ಕಲಾ ಮಂದಿರದಲ್ಲಿ ಶ್ರೀ ಹರಿ ಮೆಲೋಡಿಸ್ ವತಿಯಿಂದ ಏರ್ಪಡಿಸಿದ್ದ ಅಂತರ್ ಜಿಲ್ಲಾ ಗಾಯನ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಹುತೇಕ ಚಲನಚಿತ್ರ ನಟರಿಗೆ ತನ್ನದೇ ಆದ ಅಭಿಮಾನಿಗಳಿದ್ದಾರೆ ಎಂದರು
ಆದರೆ ಪುನೀತ್ ರಾಜ್ಕುಮಾರ್ ಅವರು ಸಣ್ಣ ಮಕ್ಕಳಿಂದ ವೃದ್ಧರವರೆಗೆ ಅಭಿಮಾನಗಳಿಸಿದ್ದಾರೆ. ರಾಜ್ಯದಲ್ಲಿ ಎತ್ತ ಸಾಗಿದರೂ ಪುನೀತ್ ರಾಜ್ಕುಮಾರ್ ಅವರು ಮತ್ತೆ ಹುಟ್ಟಿ ಬಾ ಎಂದು ಅಭಿಮಾನಿಗಳು ಹಾಗಿರುವ ಭಾವಚಿತ್ರ ರಾರಾಜಿಸುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಅವರ ಹುಟ್ಟು ಹಬ್ಬದ ದಿನ ಶ್ರೀಹರಿ ಮೆಲೋಡಿಸ್ ಪುನೀತ್ ಅವರ ಹೆಸರಿನಲ್ಲಿ ಗಾಯನ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಹಣದಿಂದ ಏನು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಶಿಕ್ಷಣ, ಸಂಗೀತ ಸೇರಿದಂತೆ ನಾನಾ ಬಗೆಯ ಕಲೆಗಳು ಹಣದಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದೇ ರೀತಿ ಸರಸ್ವತಿ ಕೂಡ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಶ್ರೀಮಂತ, ಬಡವ ಎಂಬ ಬೇಧ ಭಾವವಿಲ್ಲ. ಹಾಗಾಗಿ ಇಂದು ಗ್ರಾಮೀಣ ಭಾಗದ ಬಡ ಜನರು ತಮ್ಮ ಪ್ರತಿಭೆ ಅನಾವರಣಗೊಳಿಸುವ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿದೆ.
ಶ್ರೀಹರಿ ಮೆಲೋಡಿಸ್ನ ಮುಖ್ಯಸ್ಥೆ ಹರಿಣಾಕ್ಷಿ ಮಾತನಾಡಿ. ಸಂಗೀತ ಪ್ರಿಯರಿಗೆ ಅವಕಾಶಗಳು ದೊರಕಿದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಾಗಾಗಿ ಈ ಗಾಯನ ಸ್ಪರ್ಧೆ ಕಲಾವಿಧರಿಗೆ ಮುಖ್ಯ ವೇದಿಕೆಯಾಗಲಿದೆ. ಸೋಲು ಗೆಲುವು ಸಾಮಾನ್ಯ. ಸಂಗೀತ ಸ್ಪರ್ಧೆಯಲ್ಲಿ ಸೋತವರು ಮತ್ತು ಗೆದ್ದವರು ಹಿಗ್ಗದೇ ಹಾಗೂ ಕುಗ್ಗದೇ ನಿರಂತರ ಕಲಿಕೆಯಲ್ಲಿ ಸಾಗಬೇಕು. ಸಂಗೀತದಲ್ಲಿ ಎಷ್ಟೇ ಪರಿಣಿತರಾದರೂ ಎಲ್ಲಾ ಗೀತೆಗಳನ್ನು ಹಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನಿರಂತರ ಶ್ರಮ ಅಗತ್ಯ ಎಂದು ಹೇಳಿದರು.
ಬೆಂಗಳೂರು, ಮೈಸೂರು, ತುಮಕೂರು, ಕಾರವಾರ, ಕುಂದಾಪುರ, ಮಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ್ದರು.
ಸರಿಗಮಪಾ ಝೀ ವಾಹಿನಿಯ ನರಹರಿ ದೀಕ್ಷಿತ್, ಹಿರಿಯ ಸಂಗೀತ ಶಿಕ್ಷಕಿ ನಿವೇದಿತ ಗಜೇಂದ್ರ, ಜಾನಪದ ಚಿಂತಕ ಬಕ್ತನಕಟ್ಟೆ ಲೋಕೇಶ್, ಮಂಗಳೂರಿನ ಆದಿತ್ಯ ಕರ್ಕೇರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಅವಿನಾಶ್ ಹಾಂದಿ, ದ್ವಿತೀಯ ಹೇಮಂತ್ ತುಮಕೂರು, ತೃತೀಯ ಸ್ಥಾನ ರವಿಶಾಸ್ತ್ರಿ ಬೆಂಗಳೂರು ಪಡೆದರು.
ಪತ್ರಕರ್ತ ರಾಘವೇಂದ್ರ ಕೆಸವೊಳಲು, ಕಸಾಪ ಜಿಲ್ಲಾ ಪ್ರಧಾನ ಸಂಚಾಲಕ ಗಣೇಶ್ ಮಗ್ಗಲಮಕ್ಕಿ, ಚಂದ್ರು ಒಡೆಯರ್, ಶ್ರೀಹರಿ ಮೆಲೋಡಿಸ್ನ ಅಂಬಾವತಿಶೆಟ್ಟಿ, ಬಕ್ಕಿ ರವೀಂದ್ರ, ಚಂದ್ರು ಸಾಲಿಯಾನ್, ಉಮೇಶ್ ಮಲ್ಲೇನಹಳ್ಳಿ, ಸುರೇಶ್ ಬಿಳಗುಳ, ಶೃತಿ, ಬಕ್ಕಿ ಮಂಜು ಮತ್ತಿತರರಿದ್ದರು.
Inter district singing competition program