ಚಿಕ್ಕಮಗಳೂರು: ಕಳೆದ ಹತ್ತು ವರ್ಷಗಳಲ್ಲಿ ಸಂಸದರಾದವರು ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ನಾನು ಎರಡು ವರ್ಷಗಳ ಕಾಲ ಸಂಸದನಾಗಿದ್ದ ಅವಧಿಯಲ್ಲಿ ಮಂಜೂರು ಮಾಡುತ್ತಿದ್ದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ತಿಳಿಸಿದರು
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಮತ್ತೆ ಹೊಸ ಯೋಜನೆಗಳನ್ನು ಜಿಲ್ಲೆಗೆ ತರಲು ಮತ್ತೊಮ್ಮೆ ಸಂಸದನಾಗಬೇಕಿದೆ. ಇದಕ್ಕೆ ಕ್ಷೇತ್ರದ ಮತದಾರರ ಆಶೀರ್ವಾದ ಬೇಕು ಎಂದು ಹೇಳಿದರು.
ಬಿಜೆಪಿ ಪಕ್ಷ ಸೇರಿದ ಕ್ಷಣ ಎಂತವರೇ ಆದರೂ ಒಳ್ಳೆಯವರಾಗುತ್ತಾರೆ. ಅದೇ ಆ ಪಕ್ಷವನ್ನು ಬಿಟ್ಟವರು ಅದೇ ಕ್ಷಣಕ್ಕೆ ಕೆಟ್ಟವರಾಗಿ ಬಿಡುತ್ತಾರೆ. ಕೇವಲ ಆರೋಪ ಮಾಡುವುದಷ್ಟೇ ಬಿಜೆಪಿ ಕೆಲಸ. ವಾಮಮಾರ್ಗದಲ್ಲಿ ಸರ್ಕಾರವನ್ನು ಬದಲು ಮಾಡಿದವರು ಇದೇ ಬಿಜೆಪಿಯವರು ಎಂದು ಆಕ್ರೋಶ ವ್ಯಕ್ತಪಡಿಸಿ, ನಾನು ಬಿಜೆಪಿಗೆ ಹೋದ ಅಧ್ಯಾಯವನ್ನೇ ಮರೆತುಬಿಡಬೇಕು ಎಂದು ನಿರ್ಧರಿಸಿದ್ದೇನೆ ಎಂದು ತಿಳಿಸಿದರು.
ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಕೆಎಂ ರಸ್ತೆ ಕಾಮಗಾರಿ ಇನ್ನೂ ಮುಕ್ತಾಯವಾಗಿಲ್ಲ. ಬಿ ಎಚ್ ರಸ್ತೆ ಕಾಮಗಾರಿಯು ಕುಂಟುತ್ತಾ ಸಾಗಿದೆ. ಸಂಸದರಾದ ಮೇಲೆ ಕೇಂದ್ರದಲ್ಲಿ ಇರಬಾರದು ಬದಲಿಗೆ ಕ್ಷೇತ್ರದಲ್ಲಿದ್ದು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಕಡೆ ಗಮನ ಹರಿಸಬೇಕು. ಆದರೆ ಈ ಹಿಂದಿನ ಸಂಸದರು ಕ್ಷೇತ್ರವನ್ನೇ ಮರೆತಿದ್ದರು ಎಂದು ಆಪಾದಿಸಿದರು.
ನಾನು ಎರಡು ವರ್ಷ ಸಂಸದನಾಗಿದ್ದ ಅವಧಿಯಲ್ಲಿ ಮಾಡಿದ ಕೆಲಸವನ್ನು ಈಗಿನ ಸಂಸದರು ೧೦ ವರ್ಷದಲ್ಲಿಯೂ ಮಾಡಲಿಲ್ಲ. ನಾನು ಸಂಸದನಾಗದಾಗ ಕೇವಲ ಸಂಸತ್ತಿಗೆ ಹೋಗಿ ಬರಲಿಲ್ಲ. ಬದಲಿಗೆ ಅಧಿಕಾರಿಗಳ ಸಂಪರ್ಕ ಬೆಳೆಸಿದೆ. ಹೀಗಾಗಿ ಕ್ಷೇತ್ರಕ್ಕೆ ಹೆಚ್ಚಿನ ಯೋಜನೆಗಳನ್ನು ಹಾಗೂ ಕಾಮಗಾರಿಗಳನ್ನು ತರಲು ಸಾಧ್ಯವಾಯಿತು. ಚಿಕ್ಕಮಗಳೂರಿಗೆ ರೈಲ್ವೆ ಸಂಪರ್ಕವೇ ಇರಲಿಲ್ಲ. ರೈಲ್ವೆ ಸಂಪರ್ಕವನ್ನು ತಂದಿದ್ದು ನಾವು. ನಮ್ಮ ಅವಧಿಯಲ್ಲಿ ಜಿಲ್ಲೆಗೆ ರೈಲು ಬಂದಿದ್ದು ಬಿಟ್ಟರೆ ಮತ್ತೆ ಒಂದೇ ಒಂದು ಹೆಚ್ಚುವರಿ ರೈಲು ಸಹ ಚಿಕ್ಕಮಗಳೂರಿಗೆ ಬಂದಿಲ್ಲ ಎಂದು ದೂರಿದರು.
ಯಾವ ಚುನಾವಣೆಯಲ್ಲಿಯೂ ನಾನು ಪ್ರತಿಸ್ಪರ್ಧಿ ವಿರುದ್ಧ ಆಪಾದನೆ ಮಾಡಿಲ್ಲ. ಹಾಗೆಯೇ ಈ ಚುನಾವಣೆಯಲ್ಲಿಯೂ ನಾನು ಪ್ರತಿಸ್ಪರ್ಧಿ ವಿರುದ್ಧ ಆಪಾದನೆ ಮಾಡುವುದಿಲ್ಲ. ಸಂಸತ್ತಿನಲ್ಲಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡಬೇಕು ಎಂದು ನಾನು ಪ್ರತಿಸ್ಪರ್ಧಿಯ ಕಾಲು ಎಳೆದಿದ್ದೇನೆ ಎಂದು ನನ್ನ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ನಾನು ಆ ರೀತಿಯ ಹೇಳಿಕೆ ನೀಡಿಯೇ ಇಲ್ಲ. ಚುನಾವಣಾ ಆಯೋಗದಲ್ಲಿಯೇ ಸತ್ಯ ಹೊರಬರಲಿದೆ ಎಂದರು.
ಪತ್ರಿಕಾ ಸಂವಾದದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಅಂಶುಮಂತ್, ಶಾಸಕರಾದ ಟಿ.ಡಿ. ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಯನಾ ಮೋಟಮ್ಮ, ಜಿ.ಎಚ್.ಶ್ರೀನಿವಾಸ್, ಮುಖಂಡರಾದ ಬಿ.ಪಿ.ಹರೀಶ್, ರವೀಶ್ ಬಸಪ್ಪ, ಎಚ್.ಪಿ.ಮಂಜೇಗೌಡ ಮತ್ತಿತರರಿದ್ದರು.
MP has not done any development work in Chikmagalur district