ಚಿಕ್ಕಮಗಳೂರು: ನಿರ್ದಿಗಂತ ಆಯೋಜನೆಯ ಅಭಿನಯ ದರ್ಪಣ ತಂಡದ ಸಹಯೋಗದ ನೇಹದ ನೇಯ್ಗೆ ರಂಗೋತ್ಸವದ ಐದನೇ ದಿನದ ಹಿಂದಿನ ದಿನ ಪ್ರದರ್ಶನಗೊಂಡ ಮತ್ತಾಯ ೨೨:೩೯ ನಾಟಕದ ಸಂವಾದ ನಡೆಯಿತು.
ನಾಟಕ ರಂಗಮಂದಿರದ ಹೊರಾಂಗಣದಲ್ಲಿ ಪ್ರೇಕ್ಷಕರೆಲ್ಲರನ್ನು ಕೂರಿಸಿ ಮಧ್ಯದಲ್ಲಿ ರಂಗಸ್ಥಳವನ್ನಾಗಿಸಿಕೊಂಡು ಇಟ್ಟಿಗೆಗಳನ್ನೇ ಬಳಸಿಕೊಂಡು ರಂಗಸಜ್ಜಿಕೆ ನಿರ್ಮಿಸಿ ನಾಟಕ ಪ್ರದರ್ಶಿಸಿದ್ದು ಸೃಜನಶಿಲವಾಗಿ ಹೊಸತನದಿಂದ ಕೂಡಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಜಗತ್ತಿನಲ್ಲಿ ಮನುಷ್ಯ ಸಂಕುಲವೆಲ್ಲಾ ನಶಿಸಿ ಕಡೆಯಲ್ಲಿ ಉಳಿಯುವ ಇಬ್ಬರು ಯೋಹಾನ್ ಮತ್ತು ಮತ್ತಾಯಿ ಪಾತ್ರಗಳಲ್ಲಾಗುವ ತಲ್ಲಣ, ಮೌಲ್ಯಗಳ ಹುಡುಕಾಟವನ್ನು ನಾಟಕ ಪ್ರಸ್ತುತಪಡಿಸಿತು. ಪ್ರೀತಿ, ಸ್ನೇಹ, ಸಂಬಂಧ, ನೆನಪು, ದ್ವೇಷ, ಸ್ವಾರ್ಥ, ಅಸ್ಥಿತ್ವದ ಬಗ್ಗೆ ಇಡೀ ನೇಹದ ನೇಯ್ಗೆ ರಂಗೋತ್ಸವದ ಆಶಯವನ್ನು ಎತ್ತಿ ಹಿಡಿದಿದೆ ಎಂಬ ಅಭಿಪ್ರಾಯ ಸಾರ್ವಜನಿಕವಾಗಿ ವ್ಯಕ್ತವಾಯಿತು.
ಹಿಂದಿನ ದಿನ ಪ್ರದರ್ಶಿತವಾದ ಚಂಪಾಶೆಟ್ಟಿ ನಿರ್ದೇಶನದ ಕೋಳಿ ಎಸ್ರು ಚಲನಚಿತ್ರದ ಬಗ್ಗೆ ಸಂವಾದ ನಡೆಯಿತು. ಹುಚ್ಚಿರವ್ವಾ ಪಾತ್ರ ಶೋಷಣೆಗೊಳಗಾಗುವ ಸಮಾಜದಲ್ಲಿನ ದುಡಿದು ಸಂಸಾರ ತೂಗುವ ಸ್ತ್ರೀಯರ ಪ್ರತಿಧ್ವನಿಯಾಗಿದ್ದಾಳೆ. ಇಂತಹ ಕತೆಗಳು ನಮ್ಮ ನೆಲದಲ್ಲಿ ಇನ್ನಷ್ಟು ವ್ಯಕ್ತವಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಪ್ರತಿರೋಧದ ಹೊಸ ಮಾದರಿಗಳು ವಿಷಯದ ಬಗ್ಗೆ ಕೆ.ವೈನಾರಾಯಣ ಸ್ವಾಮಿ ಮಾತನಾಡಿದರು. ಸಂಜೆ ಮಲ್ಲಿಗೆ ಸುಧೀರ್ ಮತ್ತು ತಂಡದಿಂದ ರಂಗಸಂಗೀತದ ಪ್ರಸ್ತುತಿಯಾಗಿ ಪ್ರೇಕ್ಷಕರನ್ನು ರಂಜಿಸಿತು. ಮೈಸೂರು ತಂಡದಿಂದ ಪ್ರತಿರೋಧದ ಹಾಡುಗಳು ಕಾರ್ಯಕ್ರಮ ನಡೆಯಿತು.
ಶಾಲಾರಂಗ ನಿರ್ದಿಗಂತ ತಂಡ ಅಭಿನಯಿಸಿದ ಅರುಣ್ ಲಾಲ್ ನಿರ್ದೇಶನದ ಮತ್ತಾಯ ಬ್ಲಾಕ್ ಬಲೂನ್ ನಾಟಕ ಪ್ರದರ್ಶನವಾಯಿತು.