ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ನೀಡಿದ್ದ ೫ ಗ್ಯಾರಂಟಿಗಳು ಪ್ರತಿ ಮನೆಗಳನ್ನು ತಲುಪಿವೆ. ಈ ಬಾರಿ ಕಾಂಗ್ರೆಸ್ ಪರವಾಗಿ ಮತದಾರರು ಮತದಾನ ಮಾಡಲಿದ್ದು ನಮ್ಮ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ಗೆಲುವು ನಿಶ್ಚಿತ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸೈಯದ್ ಹನೀಫ್ ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು ಜಯಪ್ರಕಾಶ್ ಹೆಗ್ಡೆಯವರು ಈ ಹಿಂದೆ ೨೦ ತಿಂಗಳು ಸಂಸದರಾಗಿದ್ದಾಗ ಕಡೂರು, ಮೂಡಿಗೆರೆ, ಬಿಸಿ ರೋಡ್ವರೆಗಿನ ರಾಷ್ಟ್ರೀಯ ಹೆದ್ದಾರಿ ಮಂಜೂರಿಗೆ ಕಾರಣರಾಗಿದ್ದಾರೆ. ಅಡಿಕೆ ಆಮದು ಶುಲ್ಕ ಹೆಚ್ಚಿಸಿ ಬೆಳೆಗಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಹೆಗ್ಡೆ ಮಂಜೂರು ಮಾಡಿದ್ದ ರಸ್ತೆ ಕಾಮಗಾರಿಗಳು ಶೋಭಾಕರಂದ್ಲಾಜೆ ಕಾಲದಲ್ಲಿ ಅಪೂರ್ಣವಾಗಿವೆ. ಅವು ಪೂರ್ಣಗೊಳ್ಳಲು ಮತ್ತೊಮ್ಮೆ ಹೆಗ್ಡೆ ಸಂಸದರಾಗಿ ಆಯ್ಕೆಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಭರವಸೆ ನೀಡಿದ್ದ ೫ ಗ್ಯಾರಂಟಿ ಯೋಜನೆಗಳನ್ನುಸರಕಾರ ಸಂಪೂರ್ಣ ಜಾರಿ ಮಾಡಿದೆ. ಎಐಸಿಸಿಯಿಂದ ಲೋಕಸಭಾ ಚುನಾವಣೆ ಭರವಸೆಯಾಗಿ ಪಂಚನ್ಯಾಯ ಯೋಜನೆ ಘೋಷಿಸಲಾಗಿದೆ. ಯುವ ನ್ಯಾಯ, ಮಹಿಳಾ ನ್ಯಾಯ ಯೊಜನೆಯಲ್ಲಿ ಪ್ರತಿ ವರ್ಷ ೧ ಲಕ್ಷ ರೂ ನೀಡಲಾಗುವುದು. ರೈತ ನ್ಯಾಯದಲ್ಲಿ ರೈತ ಸಮುದಾಯದ ಸಾಲಮನ್ನಾ, ಶ್ರಮಿಕ ನ್ಯಾಯದಲ್ಲಿ ದಿನಕ್ಕೆ ಕೂಲಿ ೪೦೦ ರೂ ನಿಗಧಿ ಮಾಡಲಾಗುವುದು, ಜಾತಿಗಣತಿ ಮಾಡುವ ಉದ್ದೇಶವನ್ನು ಕಾಂಗ್ರೆಸ್ ಹೊಂದಿದೆ ಎಂದು ಹೇಳಿದರು.
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಈ ಚುನಾವಣೆಯಲ್ಲಿ ಜಾತಿ, ಧರ್ಮದ ನಡುವೆ ವಿಷಬೀಜ ಬಿತ್ತುತ್ತಿದೆ. ಸರಕಾರದ ಸ್ವಾಯುತ್ತ ಸಂಸ್ಥೆಗಳಾದ ಐಟಿ, ಇಡಿ, ಸಿಬಿಐ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡು ಅಧಿಕಾರ ಹಿಡಿಯಲು ಹೊರಟಿದೆ ಎಂದು ಆರೋಪಿಸಿದರು.
ಲೋಕಸಭೆ ಚುನಾವಣೆ ಸಂವಿಧಾನದ ಅಳಿವು ಉಳಿವಿನ ಮಧ್ಯೆ ನಡೆಯುತ್ತಿದೆ. ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುವವರ ವಿರುದ್ಧ ಪ್ರಬುದ್ಧ ಮತದಾರರು ಈ ಬಾರಿ ಮತ ಚಲಾಯಿಸಲಿದ್ದಾರೆ ಎಂದು ಹೇಳಿದರು. ಬಿಜೆಪಿ ಆಂತರಿಕವಾಗಿ ೨೦೦ ಸ್ಥಾನ ಗೆಲ್ಲಲಿದೆ ಎಂಬ ಸಮೀಕ್ಷೆ ಹೇಳುತ್ತಿದ್ದರೂ ೪೦೦ ಸ್ಥಾನದ ಭ್ರಮೆಯಲ್ಲಿದ್ದಾರೆ.
ಈ ಹಿಂದೆ ಬಿಜೆಪಿ ನೀಡಿದ್ದ ೨ ಕೋಟಿ ಉದ್ಯೋಗ, ಪ್ರತಿ ಖಾತೆಗೆ ೧೫ ಲಕ್ಷ ರೂ.ಹಣ, ಕಪ್ಪು ಹಣ ವಾಪಸ್ಸು ತರುವುದು ಈ ಎಲ್ಲ ಭರವಸೆಗಳು ಹುಸಿಯಾಗಿದ್ದು ಈ ಹಿನ್ನೆಲೆಯಲ್ಲಿ ಮತದಾರರು ಈ ಬಾರಿ ಬಿಜೆಪಿಯನ್ನು ಕೇಂದ್ರದಿಂದ ಕಿತ್ತೊಗೆಯಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸತೀಶ್, ಗಂಗಾಧರ ಇದ್ದರು.
Congress candidate Jayaprakash Hegde is certain to win