ಚಿಕ್ಕಮಗಳೂರು: ರಾಜ್ಯಾದ್ಯಂತ ಆವರಿಸಿರುವ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗದ ರಾಜ್ಯ ಆಡಳಿತಾರೂಢ ಕಾಂಗ್ರೇಸ್ ಸರ್ಕಾರ ಮೊಸಳೆ ಕಣ್ಣೀರು ಹಾಕಿಕೊಂಡು ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ವಿಜಯೇಂದ್ರ ಹೇಳಿದರು.
ಜಿಲ್ಲೆಯ ತರೀಕೆರೆಯಲ್ಲಿ ಆಯೋಜಿಸಿದ್ದ ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಮುಂಬರುವ ಚುನಾವಣೆಯಲ್ಲಿ ದಲಿತರು, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಬಡವರು, ರೈತ ವಿರೋಧಿ ರಾಜ್ಯ ಸರ್ಕಾರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಕರೆ ನೀಡಿದರು.
ಕಳೆದ ೧೦ ವರ್ಷಗಳ ಅವಧಿಯಲ್ಲಿ ದೇಶದ ಇತಿಹಾಸದಲ್ಲಿಯೇ ಸುವರ್ಣ ಅಕ್ಷರಗಳಲ್ಲಿ ಬರೆದಿಡಬಹುದಾದ ಭ್ರಷ್ಟಚಾರ ರಹಿತ ಆಡಳಿತ ನೀಡಿದ ಪ್ರಪಂಚದ ೮ನೇ ಅದ್ಭುತವಾದ ಬಿಜೆಪಿ ಸರ್ಕಾರ ಮತ್ತೊಮ್ಮೆ ಗೆದ್ದು ಬೀಗಲಿದೆ ಎಂದು ಹೇಳಿದರು.
ಉಚಿತ ಬಸ್, ಉಚಿತ ವಿದ್ಯುತ್, ಉಚಿತ ಅಕ್ಕಿ ಸೇರಿದಂತೆ ಗ್ಯಾರಂಟಿಗಳನ್ನು ಒಂದು ಕೈಯಲ್ಲಿ ನೀಡಿ ಬಸ್ ಟಿಕೇಟ್, ವಿದ್ಯುತ್, ಸ್ಟಾಂಪ್ ಡ್ಯೂಟಿ, ಅಬಕಾರಿ ಶುಲ್ಕ ಏರಿಸಿ ಇನ್ನೊಂದು ಕೈಯಲ್ಲಿ ಕಿತ್ತುಕೊಂಡು ಉಚಿತ ಎಂಬ ಭ್ರಮೆಯನ್ನು ರಾಜ್ಯ ಸರ್ಕಾರ ಮೂಡಿಸುತ್ತಿದೆ ಎಂದು ಕಿಡಿಕಾರಿದರು.
ಮುಂಬರುವ ಲೋಕಸಭಾ ಚುನಾವಣೆ ೨ ರಾಜಕೀಯ ಪಕ್ಷಗಳ, ಜಾತಿಗಳ, ಗ್ರಾ.ಪಂ.ಗಳ ಚುನಾವಣೆಯಲ್ಲ ಇದು ದೇಶದ ಭವಿಷ್ಯವನ್ನು ರೂಪಿಸುವ ಚುನಾವಣೆಯಾಗಿದ್ದು ಕಾರ್ಯಕರ್ತರು ಮೈಮರೆಯದೇ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ನಿದ್ರೆ ಕಳೆದುಕೊಂಡಿದ್ದಾರೆ.
ಕಾರ್ಯಕರ್ತರು ಮತ್ತು ಮುಖಂಡರು ಬೇರೆ ಬೂತ್ಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸರಳ, ಸಜ್ಜನ ಅಭ್ಯರ್ಥಿ ಕೋಟಾ ಶ್ರೀನಿವಾಸ್ಪೂಜಾರಿಯವರ ಗೆಲುವಿಗೆ ಶ್ರಮಿಸಬೇಕೆಂದರು.
ಮಾಜಿ ಶಾಸಕಸಿ.ಟಿ.ರವಿ ಮಾತನಾಡಿ ರಾಜಕಾರಣ ಮಾಡುತ್ತಿರುವುದು ಹಿಂದುತ್ವಕ್ಕಾಗಿ, ಜಾತಿಗಾಗಿ ರಾಜಕಾರಣ ಮಾಡುತ್ತಿಲ್ಲ, ಜಾತಿ ಉಳಿಸುವುದಕ್ಕಿಂತ ದೇಶ ಉಳಿಸುವ ಸಲುವಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲರೂ ಬಿಜೆಪಿ ಬೆಂಬಲಿಸಬೇಕು ಎಂದರು.
ದರೋಡೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದ್ದು, ಚುನಾವಣೆಯಲ್ಲಿ ದರೋಡೆಕೋರರಿಗೆ ಬುದ್ಧಿ ಕಲಿಸಬೇಕು ಕಾಂಗ್ರೆಸ್ ಸೈನ್ಯದಲ್ಲಿ ಮೀಸಲಾತಿ ಕೊಡುವ ಸಂಚು ರೂಪಿಸುತ್ತಿದೆ. ಶಾಶ್ವತ ನೀರಾವರಿ ಯೋಜನೆಗೆ ೧,೨೮೧ ಕೋಟಿ ರೂ ಮಂಜೂರು ಮಾಡಿಸಿ ಮೊದಲ ಹಂತದ ಕಾಮಗಾರಿ ಆರಂಭಿಸಲಾಗಿದೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿ, ನೆಮ್ಮದಿಯ ಬದುಕಿಗೆ ಶಕ್ತಿ ನೀಡಿದ ಬಿಜೆಪಿಗೆ ಮತ ಹಾಕಬೇಕು. ಭಾರತದ ಭವಿಷ್ಯ ಬರೆಯಲಿರುವ ಚುನಾವಣೆ ಹೊಸ ಮಜಲಿಗೆ ಸಾಕ್ಷಿಯಾಗಲಿದೆ. ರಾಮಮಂದಿರ ರಾಷ್ಟ್ರ ಮಂದಿರವಾಗಿ ನಿರ್ಮಾಣವಾಗಿದೆ. ಚುನಾವಣೆಯಲ್ಲಿ ಆಶೀರ್ವದಿಸಿ ಅವಕಾಶ ನೀಡಿದರೆ, ಕ್ಷೇತ್ರವನ್ನು ಮಾದರಿಗೊಳಿಸಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ, ಮಾಜಿ ಸಚಿವರಾದ ಸಿ.ಟಿ ರವಿ, ಜೆ.ಸಿ ಮಾಧುಸ್ವಾಮಿ, ಆರಗ ಜ್ಞಾನೇಂದ್ರ, ಪ್ರಮೋದ್ಮಧ್ವರಾಜ್, ಡಿ.ಎನ್ ಜೀವರಾಜ್, ಮಾಜಿ ಶಾಸಕ ಡಿ.ಎಸ್.ಸುರೇಶ್ , ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ಶೆಟ್ಟಿ, ಜೆಡಿಎಸ್ ಅಧ್ಯಕ್ಷ ರಂಜನ್ಅಜಿತ್ಕುಮಾರ್, ಎಸ್.ಎಂ.ನಾಗರಾಜ್, ಕೃಷ್ಣಮೂರ್ತಿ, ಧ್ರುವಕುಮಾರ್ ಸೇರಿದಂತೆ ಹಲವರಿದ್ದರು.
Lok Sabha election campaign program organized in Tarikere