July 16, 2024

ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಲೋಕೇಶ್.ಬಿ ಅವಿರೋಧ ಆಯ್ಕೆ

0
ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಲೋಕೇಶ್.ಬಿ ಅವಿರೋಧ ಆಯ್ಕೆ

ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಲೋಕೇಶ್.ಬಿ ಅವಿರೋಧ ಆಯ್ಕೆ

ಚಿಕ್ಕಮಗಳೂರು- ಕರ್ತಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಲೋಕೇಶ್.ಬಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ರಂಗನಾಥ್ ಘೋಷಣೆ ಮಾಡಿದರು.

ಸಫಾಯಿ ಕರ್ಮಚಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಕರ್ತಿಕೆರೆ ಗ್ರಾಮಪಂಚಾಯಿತಿ ಇಂದು ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆದಿದೆ. ಗ್ರಾಮಪಂಚಾಯಿತಿಯ ಸದಸ್ಯರು ಹಾಗೂ ಅಧಿಕಾರಿ ವರ್ಗವನ್ನು ವಿಶ್ವಾಸಕ್ಕೆ ಪಡೆದು ಹೆಚ್ಚಿನ ಅನುದಾನ ತಂದು ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮಾದರಿ ಪಂಚಾಯಿತಿಯನ್ನಾಗಿಸುವಲ್ಲಿ ಶ್ರಮಿಸಲಿ ಎಂದು ಸಲಹೆ ನೀಡಿದರು.

ಕರ್ತಿಕೆರೆ ಪಂಚಾಯಿತಿಯು ನುಡಿದಂತೆ ನಡೆದುಕೊಂಡು ಹೋಗುತ್ತಿದೆ, ಬಿಜೆಪಿ ಪಕ್ಷದ ನಿರ್ಧಾರಕ್ಕೆ ಬದ್ಧವಾಗಿರುವುದರ ಜೊತೆಗೆ ಭಾರತೀಯ ಜನತಾ ಪಾರ್ಟಿ ಸತತವಾಗಿ ಅಧಿಕಾರ ಹಿಡಿದುಕೊಂಡು ಬಂದಿದೆ, ಕರ್ತಿಕೆರೆ ಗ್ರಾಪಂ ಎಂಟು ಗ್ರಾಮಗಳನ್ನು ಒಳಗೊಂಡಿದ್ದು ಹಂತಹಂತವಾಗಿ ೮ ಗ್ರಾಮಗಳ ಅಭಿವೃದ್ಧಿಗಾಗಿ ಮಾಜಿ ಶಾಸಕ ಸಿ.ಟಿ.ರವಿ ರವರು ಶ್ರಮಿಸಿದ್ದಾರೆ, ೩೫ ಕೋಟಿ ರೂ ವೆಚ್ಚದ ಅಭಿವೃದ್ಧಿ ಕೆಲಸವನ್ನು ಮಾಡಿದ ನಮ್ಮ ಮೆಚ್ಚಿನ ನಾಯಕರಿಗೆ ಗ್ರಾಮದ ಪರವಾಗಿ ಧನ್ಯವಾದಗಳು ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಗ್ರಾಮಸ್ಥರು ತಮ್ಮ ಸಮಸ್ಯೆಗಳನ್ನು ನಿಮ್ಮ ಬಳಿ ತಂದಾಗ ಮೊದಲು ಗೌರವಯುತವಾಗಿ ಮಾತನಾಡಿಸುವುದರ ಜೊತೆಗೆ ಅವರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು, ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿ ಪಕ್ಷದ ಮುಖಂಡರು ಸದಾ ನಿಮ್ಮೊಂದಿಗೆ ಇರುತ್ತಾರೆ, ಎಲ್ಲರು ಒಗ್ಗಟ್ಟಿನಿಂದ ಗ್ರಾಮ ಪಂಚಾಯಿತಿಗೆ ಒಳ್ಳೆಯ ಹೆಸರನ್ನು ತಂದುಕೊಡೊಣ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಮಾತನಾಡಿ ಸರ್ಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಎಲ್ಲರ ಸಹಕಾರದೊಂದಿಗೆ ಕಾರ್ಯಗತ ಮಾಡಲಾಗುವುದು, ಮುಖ್ಯವಾಗಿ ಗ್ರಾಮಗಳಲ್ಲಿನ ಕುಡಿಯುವ ನೀರು, ಬೀದಿ ದೀಪ ಸಮಸ್ಯೆ, ಸ್ವಚ್ಚತೆಗೆ ಆಧ್ಯತೆ ನೀಡಿ ಕೆಲಸ ಮಾಡಬೇಕು ಎಂದರು.

ಕರ್ತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾರಾಣಿಗುರುಸ್ವಾಮಿ ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿಯ ಜೊತೆಗೆ ಗ್ರಾಮಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ, ಬೀದಿ ದೀಪ, ಕುಡಿಯುವ ನೀರು, ಚರಂಡಿ ಮತ್ತು ರಸ್ತೆಗೆ ಪ್ರಮುಖ ಆದ್ಯತೆ ನೀಡಿ ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುತ್ತೇವೆ ಎಂದರು.

ಗ್ರಾಪಂ ಉಪಾಧ್ಯಕ್ಷ ಲೋಕೇಶ್.ಬಿ ಮಾತನಾಡಿ ಗ್ರಾಮದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ, ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಗಮನ ನೀಡಿ ಎಲ್ಲಾ ಸದಸ್ಯರ ಸಹಕಾರದಿಂದ ಮಾದರಿ ಗ್ರಾಮ ಪಂಚಾಯಿತಿ ಮಾಡುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕನಕರಾಜ್ ಅರಸ್, ನೆಟ್ಟೆಕೆರೆಹಳ್ಳಿ ಜಯ್ಯಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೀವ್, ಬಿಜೆಪಿ ನಗರಾಧ್ಯಕ್ಷ ಪುಷ್ವರಾಜ್, ಜಯವರ್ಧನ್, ನಿಂಗೇಗೌಡ, ಹೇಮರಾಜ್, ಗ್ರಾಮಪಂಚಾಯಿತಿ ಸದಸ್ಯರಾದ ಯತೀಶ್, ಪುಟ್ಟಸ್ವಾಮಿ ಶೆಟ್ಟಿ, ಮೋಹನ್, ಗಣೇಶ್ ರಾಜ್ ಅರಸ್, ರೇಣುಕಾ, ಚಂದ್ರಶೇಖರ್ ರಾಜ್ ಅರಸ್, ಹೇಮಾವತಿ ಕೃಷ್ಣರಾಜ್ ಅರಸ್, ಭಾಗ್ಯ, ಪಾರ್ವತಮ್ಮ, ಸಿದ್ಧರಾಮೇಶ್ವರ, ನೇತ್ರ, ನಾಗೇಶ್, ರೇಖಾ, ಲೋಕೇಶ್, ಸೌಮ್ಯ, ಪಿಡಿಓ ಕಾರ್ಯದರ್ಶಿ ಜಯರಾಮ್ ಸೇರಿದಂತೆ ಮತ್ತಿತರರು ಇದ್ದರು.

Lokesh B was elected unopposed as the Vice President of Karthikere Village

About Author

Leave a Reply

Your email address will not be published. Required fields are marked *