ಚಿಕ್ಕಮಗಳೂರು: ಮೀನುಗಾರಿಕೆ ಮತ್ತು ಮೀನು ಕೃಷಿಕರಿಗೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಮೀನುಮರಿಗಳನ್ನು ವಿತರಣೆ ಮಾಡಲಾಗಿದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.
ಅವರು ಇತ್ತೀಚೆಗೆ ಮೀನುಗಾರಿಕೆ ಇಲಾಖೆಯಲ್ಲಿ ಏರ್ಪಡಿಸಿದ್ದ ೨೦೨೩-೨೪ನೇ ಸಾಲಿಗೆ ವೃತ್ತಿಪರ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್ ಹಾಗೂ ಹರಿಗೋಲು ವಿತರಿಸಿ ಮಾತನಾಡಿದರು.
ತಾಲ್ಲೂಕು ಅಗಸರ ಕಟ್ಟೆ ಮೀನುಮರಿ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು ಮೀನುಗಾರರ ವಿವಿಧ ಬೇಡಿಕೆಗಳನ್ನು ಹಂತ-ಹಂತವಾಗಿ ಪೂರೈಕೆ ಮಾಡಲು ಸರ್ಕಾರ ಬದ್ಧವಾಗಿರುವುದಾಗಿ ಭರವಸೆ ನೀಡಿದರು.
ಚಿಕ್ಕಮಗಳೂರು ತಾಲೂಕಿನಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣ ಮಾಡುವಂತೆ ಕೋರಿದ ಮೀನುಗಾರರೊಂದಿಗೆ ಚರ್ಚಿಸಿ ಇದಕ್ಕೆ ಬೇಕಾದ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಇಲಾಖೆ ವ್ಯಾಪ್ತಿಯ ಕೆರೆಗಳಲ್ಲಿ ಮೀನುಗಾರಿಕೆಗೆ ಸೂಕ್ತ ನಿರ್ವಹಣೆ ಮಾಡುವ ಕುರಿತು ಮತ್ತು ಮೀನುಗಾರರು ಮೀನುಗಾರಿಕೆ ಮಾಡುವಾಗ ಕಡ್ಡಾಯವಾಗಿ ಲೈಫ್ ಜಾಕೆಟ್ ಧರಿಸುವ ಮೂಲಕ ಜೀವ ರಕ್ಷಣೆ ಮಾಡಿಕೊಳ್ಳುವಂತೆ ವಿನಂತಿಸಿದರು.
ಮೀನುಗಾರರಿಗೆ ಇಲಾಖೆ ವತಿಯಿಂದ ಲೈಫ್ ಜಾಕೆಟ್ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಕೂಡಲೇ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮೀನುಗಾರಿಕಾ ಸಹಾಯಕ ನಿರ್ದೇಶಕರಾದ ಸಿ.ಆರ್.ಕವನ ಮತ್ತಿತರರು ಉಪಸ್ಥಿತರಿದ್ದರು.
Distribution of high quality fish fry to fishermen