ಚಿಕ್ಕಮಗಳೂರು: ಪರಿಶಿಷ್ಟ ಜಾತಿ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ರೂಪಿಸುವ ಯೋಜನೆಗೆ ಬಿಡುಗಡೆಯಾಗುವ ಅನುದಾನವನ್ನು ಕಾಲಮಿತಿಯಲ್ಲಿ ವೆಚ್ಚ ಮಾಡಿ ಗುರಿ ಸಾಧಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಎಸ್.ಸಿ.ಪಿ., ಟಿ.ಎಸ್.ಪಿ ಯೋಜನೆಯ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಕೆಲವು ಇಲಾಖೆ ಅಧಿಕಾರಿಗಳು ವರ್ಷವಿಡಿ ಅನುದಾನ ಖರ್ಚು ಮಾಡದಿದ್ದರೂ ಮಾರ್ಚ್ನಲ್ಲಿ ಶೇ. ೧೦೦ ರಷ್ಟು ಸಾಧನೆ ಆಗಿದೆ ಎಂದು ಮಾಡುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದೆ ಕೊನೆಯಲ್ಲಿ ಖರ್ಚು ಮಾಡುವ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ನೈಜ ಕಾರಣಗಳಲ್ಲಿದಿದ್ದಲ್ಲಿ ಶಿಸ್ತು ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಕಾಲದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅನುದಾನ ವೆಚ್ಚ ಮಾಡಿ, ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯದಿರುವ ಅಧಿಕಾರಿಗಳು ಅನುಮೋದನೆ ಪಡೆದು ಅರ್ಜಿ ಆಹ್ವಾನಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕ್ರಮವಹಿಸುವಂತೆ ತಿಳಿಸಿದರು.
ಕೆಲವು ಇಲಾಖೆಗಳ ಪ್ರಗತಿ ಶೂನ್ಯವಾಗಿದ್ದು ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು ಕಾಲಮಿತಿಯೊಳಗೆ ನಿಗಧಿತ ಗುರಿ ಸಾಧಿಸಬೇಕು ಎಂದ ಜಿಲ್ಲಾಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನರ ಅಭ್ಯುದಯಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ ಸೌಲತ್ತುಗಳನ್ನು ಕಲ್ಪಿಸಬೇಕು. ಆ ಕುರಿತು ವರದಿಯನ್ನು ನಿಗದಿತ ಅವಧಿಯೊಳಗೆ ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಬಿ. ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
SCP-TSP Expenditure within the grant period