ಚಿಕ್ಕಮಗಳೂರು: ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಶ್ಯಾಮ್ಭಟ್ ಗುರುವಾರ ನಗರದ ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆಗೆ ಭೇಟಿನೀಡಿ ಪರಿಶೀಲಿಸಿ, ರೋಗಿಗಳ ಆರೋಗ್ಯ ವಿಚಾರಿಸಿ ಸಮಸ್ಯೆ ಕೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷರು ಈ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನೀಡುತ್ತಿರುವ ಸೌಲಭ್ಯಗಳು ಕೊರತೆ ಇದೆ. ಹೊಸಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರಿಸುವುದರಿಂದ ಸ್ವಲ್ಪ ಮಟ್ಟಿನ ಸಮಸ್ಯೆ ನಿವಾರಣೆಯಾಗಲಿದೆ ಎಂದು ವೈದ್ಯರು ಹೇಳುತ್ತಾರೆಂದರು.
ರೇಡಿಯೋಜಿಲಿಸ್ಟ್ ವೈದ್ಯರಿಲ್ಲ, ಎಕ್ಸರೇಗೆ ಹೊರಗಡೆ ಬರೆದುಕೊಡುತ್ತಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸರ್ಕಾರಕ್ಕೆ ಶಿಫಾರಸ್ ಮಾಡಲಾಗುವುದು. ಈ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಾಸ್ರೂಂ ಸ್ವಚ್ಚವಾಗಿಲ್ಲ, ಶೌಚಾಲಯಗಳನ್ನು ಸ್ವಚ್ಚವಾಗಿಟ್ಟುಕೊಳ್ಳಲು ಗಮನಹರಿಸಬೇಕಾಗಿದೆ. ಸರ್ವರ್ ಸಮಸ್ಯೆ ಇರುವುದರಿಂದ ಚೀಟಿಪಡೆದುಕೊಳ್ಳುವ ಕೌಂಟರ್ನಲ್ಲಿ ರೋಗಿಗಳ ಅಧಿಕಸಂಖ್ಯೆಯಲ್ಲಿರುವುದು ಕಂಡು ಬಂದಿದೆ ಎಂದು ಮಾನವಹಕ್ಕು ಆಯೋಗದ ಅಧ್ಯಕ್ಷರು ಹೇಳಿದರು.
ಆಸ್ಪತ್ರೆಯಲ್ಲಿ ಸ್ಥಳವಾಕಾಶದ ಕೊರತೆ ಉಂಟಾಗಿದೆ. ಚಿಕಿತ್ಸೆ ನೀಡಲು ಯಾವುದೇ ವೈದ್ಯರು ಹಣವನ್ನು ಪಡೆದುಕೊಳ್ಳುತ್ತಿಲ್ಲವೆಂದು ರೋಗಿಗಳು ತಿಳಿಸಿದ್ದಾರೆ. ಜೊತೆಗೆ ಒಳ್ಳೆಯ ಚಿಕಿತ್ಸೆ ದೊರೆಯುತ್ತಿದೆ. ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಹೇಳುತ್ತಿದ್ದು, ಹಾಗಾಗಿ ರೋಗಿಗಳ ಸಂಖ್ಯೆ ಹೆಚ್ಚಾಗಲು ಕಾರಣವೆಂದರು.
ಈ ಆಸ್ಪತ್ರೆಗೆ ಆಂಬುಲೆನ್ಸ್ ನೀಡುವಂತೆ ಸರ್ಕಾರಕ್ಕೆ ಆಸ್ಪತ್ರೆಯಿಂದ ಮನವಿ ಸಲ್ಲಿಸಲಾಗಿದೆ. ವೈದ್ಯಕೀಯ ಕಾಲೇಜು ಆರಂಭವಾಗಿರುವುದರಿಂದ ವೈದ್ಯರ ಸಮಸ್ಯೆ ಅಷ್ಟಾಗಿ ಕಾಣಿಸುತ್ತಿಲ್ಲ, ಸ್ವಚ್ಚತೆಗೆ ಒತ್ತುನೀಡಬೇಕು. ಸ್ಥಳಾವಕಾಶದ ಕೊರತೆಯನ್ನು ನೀಗಿಸಿಕೊಳ್ಳಬೇಕಿದೆ ಎಂದರು. ಜಿಲ್ಲಾ ಸರ್ಜನ್ ಡಾ.ಸಿ.ಮೋಹನ್ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವತ್ಬಾಬು, ಆಸ್ಪತ್ರೆಯ ವೈದ್ಯರುಗಳು ಇದ್ದರು.
ಬಳಿಕ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರು ಬೇಲೂರು ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ಹಾಸ್ಟೆಲ್, ಹಿರೇಮಗಳೂರಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಾಮನಹಳ್ಳಿಯಲ್ಲಿರುವ ಬಿಸಿಎಂ ಇಲಾಖೆ ವಿದ್ಯಾರ್ಥಿನಿಲಯ, ಜಿಲ್ಲಾ ಉಪಕಾರಾಗೃಹ, ಕದ್ರಿಮಿದ್ರಿಯಲ್ಲಿರುವ ಜೀವನಸಂಧ್ಯಾವೃದ್ಧಾಶ್ರಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
Human Rights Commission Chairman’s visit to Public Hospital