ಚಿಕ್ಕಮಗಳೂರು: ಜಿಲ್ಲೆಯ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ರೈತಮೋರ್ಚಾದ ಪದಾಧಿಕಾರಿಗಳು ಹಾಗೂ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ಬಿಜೆಪಿ ಕಚೇರಿ ಪಾಂಚಜನ್ಯದಿಂದ ಹಸುವಿನೊಂದಿಗೆ ಮೆರವಣಿಗೆ ಹೊರಟು ಆಜಾದ್ ವೃತ್ತಕ್ಕೆ ಆಗಮಿಸಿ ದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಲು ಬ್ಯಾರಿಕೇಡ್ ಬದಿಗೆ ಸರಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದುಕೊಂಡರು.ವಾಹನ ಹತ್ತುವಾಗ ಸರ್ಕಾರ ಮತ್ತು ಮುಖ್ಯಮಂತ್ರಿಗಳ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದ ವಿವಿಧ ಭಾಗದ ರೈತರು ನೊಂದಿರುವಂತೆ ನಮ್ಮ ಜಿಲ್ಲೆಯ ರೈತರು ಸಹ ಕೆಳಕಂಡ ಸಮಸ್ಯೆಗಳಿಂದ ನೊಂದಿರುತ್ತಾರೆ. ಹಾಲಿನ ದರ ಏರಿಕೆಯ ಲಾಭವನ್ನು ರೈತರಿಗೆ ನೇರವಾಗಿ ವರ್ಗಾವಣೆ ಮಾಡಿ ಸಂಕಷ್ಠದಲ್ಲಿರುವ ಹಾಲು ಉತ್ಪಾದಕರಿಗೆ ನೆರವಾಗಬೇಕು. ಬಾಕಿ ಇರುವ ಹಾಲಿನ ಪ್ರೋತ್ಸಾಹಧನವನ್ನು ತತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಕೇಂದ್ರದ ಕಿಸಾನ್ ಸಮ್ಮಾನ್ ಯೋಜನೆಗೆ ಪೂರಕವಾಗಿ ರಾಜ್ಯ ಸರ್ಕಾರ ಕೊಡುತ್ತಿದ್ದ ೪ಸಾವಿರ ರೂಗಳನ್ನು ಮತ್ತೆ ರೈತರ ಖಾತೆಗಳಿಗೆ ಜಮೆಮಾಡಲು ಪ್ರಾರಂಭಿಸಬೇಕು. ಮೊದಲು ಇದ್ದ ರೀತಿಯಲ್ಲಿಯೇ ಕನಿಷ್ಠ ದರದಲ್ಲಿ ರೈತರ ಕೃಷಿ ಪಂಪ್ಸೆಟ್ಗಳಿಗೆ ಟ್ರಾನ್ಸ್ಫಾರ್ಮರ್ ಕೂರಿಸುವಂತೆ ಇಂಧನ ಕಾತೆ ಸಚಿವರಿಗೆ ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ರೈತರ ಜಮೀನಿನ ಮಾರಾಟ ನೋಂದಣಿ ಶುಲ್ಕ ಕನಿಷ್ಠಮಟ್ಟಕ್ಕೆ ಇಳಿಸಬೇಕು. ಪಹಣಿ ಶುಲ್ಕ ೧೫ ರೂ.ಗಳಿಗೆ ಇಳಿಸಬೇಕು. ಶೀಘ್ರವೇ ಕ್ಷೀರ ಸಮೃದ್ಧಿ ಬ್ಯಾಂಕ್ ಪ್ರಾರಂಭಿಸಿ, ಹಾಲು ಉತ್ಪಾದಕರಿಗೆ ಸಹಕಾರಿಯಾಗಬೇಕು. ಆತ್ಮಹತ್ಯೆಗೆ ಒಳಗಾದ ರೈತ ಕುಟುಂಬಗಳಿಗೆ ಶೀಘ್ರವೇ ಪರಿಹಾರ ಹಣವನ್ನು ಬಿಡುಗಡೆಗೊಳಿಸಬೇಕು.ರೈತರ ಮಕ್ಕಳಿಗೆ ರೈತ ವಿದ್ಯಾನಿಧಿ ತಕ್ಷಣ ಹಾಕಿ ಬರಗಾಲದಲ್ಲಿ ಸಂಕಷ್ಠಕ್ಕೊಳಗಾದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂದು ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಆಗ್ರಹಿಸಿದರು.
ರೈತಮೋರ್ಚಾದ ಜಿಲ್ಲಾಧ್ಯಕ್ಷ ಶಂಭೈನೂರು ಆನಂದಪ್ಪ, ಜಿಲ್ಲಾ ಪ್ರಧಾನಕಾರ್ಯದರ್ಶಿ ದಿನೇಶ್ ಜಿಲಾ ಕಾರ್ಯದರ್ಶಿ ದಿನೇಶ್ ಪಾದಮನೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ರಾಜ್ಯ ರೈತ ಮೋ ರ್ಚಾಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಚಿತ್ರದುರ್ಗ ಜಿಲ್ಲಾ ಪ್ರಭಾರಿ ಸಿ.ಆರ್.ಪ್ರೇಮಕುಮಾರ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ನಾಗರಾಜು, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ನಗರ ರೈತಮೋರ್ಚಾ ಅಧ್ಯಕ್ಷ ನಿಶಾಂತ್, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ಉಮೇಶ್,ಎಸ್.ಸಿ.ಮೋರ್ಚಾದ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್, ಹಿರೇಮಗಳೂರು ಕೇಶವ ಇದ್ದರು.
BJP protests demanding fulfillment of various demands