ಮೂಡಿಗೆರೆ: ಸಾವಿರಾರು ವರ್ಷಗಳ ಪುರಾತನ ಇತಿಹಾಸವುಳ್ಳ ಕನ್ನಡ ನಾಡು, ನುಡಿಗೆ ಧಕ್ಕೆ ಅಥವಾ ಅಗೌರವ ಉಂಟಾದರೆ ನ್ಯಾಯಯುತವಾಗಿ ಹೋರಾಟ ನಡೆಸಲು ಕಾರ್ಯಕರ್ತರು ಮುಂ ದಾಗಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಕೆಂಪನಹಳ್ಳಿ ಅಶೋಕ್ ಹೇಳಿದರು.
ಪಟ್ಟಣದ ಲ್ಯಾಂಪ್ ಸೊಸೈಟಿ ಸಭಾಂಗಣದಲ್ಲಿ ಮೂಡಿಗೆರೆ ತಾಲ್ಲೂಕು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಶರಣರು, ವಚನಗಾರರು ಹಾಗೂ ಕವಿಗಳು ಕನ್ನಡ ಪರಂಪರೆಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದ ನಾಡಿನಲ್ಲಿ ಆಂಗ್ಲಭಾಷೆ ವ್ಯಾಮೋಹದ ಪ್ರಭಾವ ಹೆಚ್ಚುತ್ತಿದೆ. ಹೀಗಾಗಿ ಕನ್ನಡತನವನ್ನು ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕುವಾರು ಪದಾಧಿಕಾರಿಗಳನ್ನು ಬಲಿಷ್ಟಗೊಳಿಸಿ ಕಾರ್ಯಚಟುವಟಿಕೆ ರೂಪಿಸುತ್ತಿದೆ ಎಂದರು.
ಇಂದಿನ ಯುವಪೀಳಿಗೆಯಲ್ಲಿ ಕನ್ನಡತನ ಮರೆಯಾಗುತ್ತಿದೆ. ಹಾಗಾಗಿ ಯುವಕರನ್ನು ಜಾಗೃತಿಗೊಳಿ ಸುವುದು ಹಾಗೂ ಕನ್ನಡ ಭಾಷೆಯನ್ನು ಪಸರಿಸುವ ನಿಟ್ಟಿನಲ್ಲಿ ಸಭೆ, ಸಮಾರಂಭ ಆಯೋಜಿಸಿ ಭಾಷೆಯ ಕಂಪನ್ನು ಪದಾಧಿಕಾರಿಗಳು ಹಬ್ಬಿಸಬೇಕು ಎಂದು ಸಲಹೆ ನೀಡಿದರು.
ಕುವೆಂಪು, ದ.ರಾ.ಬೇಂದ್ರ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ತೇಜಸ್ವಿಯವರ ಕನ್ನಡದ ಕೃತಿಗಳು ರಾಷ್ಟ್ರಾಧ್ಯಂತ ಮನ್ನಣೆ ಗಳಿಸಿದೆ. ಇಂಥ ಮಹಾನೀಯರು ನಾಡಿನಲ್ಲಿ ನಾವೆಲ್ಲರೂ ಜನ್ಮಸಿರುವುದಕ್ಕೆ ಹೆಮ್ಮೆ ಪಡಬೇಕು ಎಂದ ಅವರು ಕನಕದಾಸ, ಪುರಂದರದಾಸರ ವಚನಗಳು ಇಂದಿನ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ತಿಳಿಸಿದರು.
ನೂತನ ತಾಲ್ಲೂಕು ಅಧ್ಯಕ್ಷ ವಿನೋದ್ ಮಾತನಾಡಿ ಸಾಮಾನ್ಯ ಕರವೇ ಕಾರ್ಯಕರ್ತನಾದ ನನ್ನನ್ನು ತಾಲ್ಲೂಕು ಘಟಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿರುವ ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಆಶಯದಂತೆ ತಾಲ್ಲೂಕಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಸಂಘಟಿಸಿ, ಸದೃಢಗೊಳಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರುದ್ರೇಶ್ ಸಿಂಹಾದ್ರಿ, ಕಾರ್ಯ ದಶಿಗಳಾದ ಯುವರಾಜ್, ಮಧುಗೌಡ, ಸಹ ಕಾರ್ಯದರ್ಶಿ ಸಾಧಿಕ್ ಅಹ್ಮದ್, ತಾಲ್ಲೂಕು ಕನ್ನಡ ಸೇನೆ ಅಧ್ಯಕ್ಷ ಹೊರಟಿರಘು, ಕಸಾಪ ಅಧ್ಯಕ್ಷ ಲಕ್ಷ್ಮಣ್ಗೌಡ ಮತ್ತಿತರರು ಹಾಜರಿದ್ದರು.
Selection of new office bearers by Mudigere Karave