ಚಿಕ್ಕಮಗಳೂರು ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಸಂಭವಿಸಬಹುದಾಗ ಆಪತ್ತುಗಳ ತಡೆಗೆ ವಿಮಾ ಯೋಜನೆಗಳ ಸೌಲಭ್ಯದ ಜೊತೆಗೆ ಆರೋಗ್ಯ ಕುರಿತಂತೆ ಅಗತ್ಯ ಮಾಹಿತಿ ನೀಡಲು ಕರೆದಿರುವ ಸಭೆ ಅರ್ಥಪೂರ್ಣ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಹೊರಸಂಪನ್ಮೂಲ ಸಿಬ್ಬಂದಿಗಳ ಕುಂದುಕೊರತೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಧಾನ ಮಂತ್ರಿ ಜೀವನ್ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಅಂಚೆ ಇಲಾಖೆ ವಿಮಾ ಯೋಜನೆ, ಪಿಎಫ್, ಇಎಸ್ಐ ಈ ಎಲ್ಲವುಗಳನ್ನು ಸರ್ಕಾರಿ ನೌಕರರು ಮಾಡಿಸುವುದರ ಜೊತೆಗೆ ನಮ್ಮ ಕುಟುಂಬದ ಸದಸ್ಯರ ಅನುಕೂಲಕ್ಕಾಗಿ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.
ಸೇವಾ ಅವಧಿಯಲ್ಲಿ ಸರ್ಕಾರಿ ನೌಕರರು ಸಂಭವಿಸುವ ವಿಪತ್ತುಗಳಿಗೆ ಹಾಗೂ ಜೀವ ಹಾನಿಗೆ ಈ ವಿಮಾ ಸೌಲಭ್ಯಗಳು ಸಹಕಾರಿಯಾಗಲಿದ್ದು, ಕುಟುಂಬದ ಆರ್ಥಿಕ ಸಂಕಷ್ಟವನ್ನು ನಿವಾರಿಸಲು ಸಕಾಲದಲ್ಲಿ ದೊರೆಯಲಿದೆ ಎಂದು ಹೇಳಿದರು.
ನೌಕರರೊಬ್ಬರು ಹಿಂದೆ ಸೇವೆ ಸಲ್ಲಿಸಿದ ಜಿಲ್ಲೆಯಲ್ಲಿ ಆಕಸ್ಮಿಕವಾಗಿ ಮೃತರಾದರು. ಆ ಸಂದರ್ಭದಲ್ಲಿ ವಿಮಾ ಸೌಲಭ್ಯ ಇದ್ದರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ಸಿಗುತ್ತಿತ್ತು ಎಂದು ಸ್ಮರಿಸಿದರು.
ವಿಮಾ ಸೌಲಭ್ಯದ ಅವಶ್ಯಕತೆ ಬಹಳಷ್ಟು ಇರುತ್ತದೆ. ಎಲ್ಲಾ ಮಧ್ಯಮ ವರ್ಗದವರು ಈ ವಿಮಾ ಸೌಲಭ್ಯಗಳನ್ನು ಮಾಡಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಎಂದು ಸಲಹೆ ನೀಡಿದರು.
ಆರೋಗ್ಯ ಕಾರ್ಡ್ ಸೌಲಭ್ಯವನ್ನು ಪ್ರತಿಯೊಬ್ಬ ನೌಕರ ಪಡೆದಿರಬೇಕು ಏಕೆಂದರೆ ಬಡತನದಿಂದ ಬಂದವರು ಅನಾರೋಗ್ಯದಿಂದ ಆಸ್ಪತ್ರೆಯ ಬಿಲ್ ಲಕ್ಷಗಟ್ಟಲೆ ಬಂದರೆ ಪಾವತಿಸುವ ಕುರಿತು ಚಿಂತಿಸಬೇಕಾಗುತ್ತದೆ ಜೊತೆಗೆ ಹೊರೆಯೂ ಆಗುತ್ತದೆ. ಆದ್ದರಿಂದ ಆರೋಗ್ಯ ಕಾರ್ಡ್ ಯೋಜನೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.
ಆಯುಷ್ಮಾನ್ ಭಾರತ್ ವಿಮಾ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರೆ ಸುಮಾರು ೫ ಲಕ್ಷ ರೂಗಳವರೆಗೆ ವಿಮಾ ಸೌಲಭ್ಯವನ್ನು ಪಡೆಯಲು ಅವಕಾಶವಿದೆ. ದಯವಿಟ್ಟು ಈ ಸಭೆಯಲ್ಲಿ ಭಾಗವಹಿಸಿರುವ ಎಲ್ಲರೂ ಇಲ್ಲಿ ತಿಳಿಸುವ ಮಾಹಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ವಿಮಾ ಸೌಲಭ್ಯ ವ್ಯಾಪ್ತಿಗೆ ಬರಬೇಕು. ಇದರಿಂದ ಯಾರೂ ವಂಚಿತರಾಗಬಾರದು ಎಂದು ಕರೆ ನೀಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸೋಮಶೇಖರ್ ಸ್ವಾಗತಿಸಿ ಮಾತನಾಡಿ, ಡೆಂಗ್ಯೂ ನಿಯಂತ್ರಣ ಮಾಡುವ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಸಿಬ್ಬಂದಿ ಸಮಗ್ರ ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಸಭೆಗೆ ಆಗಮಿಸಿರುವ ವಿವಿಧ ಇಲಾಖೆಯ ಸಿಬ್ಬಂದಿ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ಇದೇ ಸಂದರ್ಭದಲ್ಲಿ ಪರಿಚಯಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ಬಾಬು, ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಶ್, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ, ಲೀಡ್ ಬ್ಯಾಂಕ್ ಅಧಿಕಾರಿ ರಾಜೇಶ್, ಭವಿಷ್ಯ ನಿಧಿ ಇಲಾಖೆಯ ಜಾರಿ ಅಧಿಕಾರಿ ಮಧುರಾನಾಥ್, ಇಎಸ್ಐ ಮ್ಯಾನೇಜರ್ ಶ್ರೀಮತಿ ರೇಣುಕಾ, ಅಂಚೆ ಇಲಾಖೆ ಸಹಾಯಕ ವ್ಯವಸ್ಥಾಪಕ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
Grievance meeting of outsourced staff held at Zilla Panchayat hall