ಚಿಕ್ಕಮಗಳೂರು: ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕಾರ್ಯ ಚಟುವಟಿಕೆಗಳಿಗಾಗಿ ಎಲ್ಲಾ ಸಂಘಟನೆಗಳು ಸೇರಿ ನಗರದ ತೇಗೂರಿನಲ್ಲಿ ಗುರುತಿಸಿಕೊಂಡಿರುವ ೧೩ ಎಕರೆ ಭೂಮಿಯನ್ನು ಅಂಬೇಡ್ಕರ್ ಅಧ್ಯಯನ ಸಂಸ್ಥೆ ಹೆಸರಿಗೆ ಮಂಜೂರು ಮಾಡುವಂತೆ ಒತ್ತಾಯಿಸಿ ಶಾಸಕರ ನೇತೃತ್ವದಲ್ಲಿ ಸರ್ಕಾರದ ಬಳಿಗೆ ನಿಯೋಗ ಹೋಗಿ ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಬಿ.ಬಿ ನಿಂಗಯ್ಯ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಶಾಸಕ ಹೆಚ್.ಡಿ ತಮ್ಮಯ್ಯ ನೇತೃತ್ವದಲ್ಲಿ ಮುಂದಿನ ವಾರ ಆರಂಭವಾಗಲಿರುವ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರ ಬಳಿಗೆ ಸರ್ವ ಪಕ್ಷಗಳ ಮುಖಂಡರು ಹಾಗೂ ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ನಿಯೋಗ ಹೋಗಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ಎಸ್ಸಿ, ಎಸ್ಟಿ ಸಮುದಾಯಗಳ ಶ್ರೇಯೋಭಿವೃದ್ಧಿಯ ಉದ್ದೇಶದಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳ ಮೂಲಕ ಶೋಷಿತ ಸಮುದಾಯದ ಪರವಾಗಿ ಜಾಗೃತಿ ಮೂಡಿಸುವ ಗುರಿಯೊಂದಿಗೆ ಸಮಾನ ಮನಸ್ಕ ಮುಖಂಡರು ಸೇರಿ ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಸಂಸ್ಥೆಯನ್ನು ಕಳೆದ ೧೦ ವರ್ಷಗಳ ಹಿಂದೆ ಸ್ಥಾಪನೆ ಮಾಡಲಾಯಿತು ಎಂದರು.
ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಮಲೆನಾಡು ಪ್ರದೇಶ ವ್ಯಾಪ್ತಿಗೆ ಬರುವ ಹಾಸನ, ಮಡಿಕೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಈ ಸಂಸ್ಥೆ ಹೊಂದಿದ್ದು, ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಇಡೀ ಶೋಷಿತ ಸಮುದಾಯದ ಪರವಾಗಿ ಕೆಲಸ ಮಾಡುವ ನೊಂದಾಯಿತ ಸಂಸ್ಥೆಯಾಗಿ ಈ ಸಂಸ್ಥೆಯನ್ನು ಜಿಲ್ಲೆಯ ವ್ಯಾಪ್ತಿಯಲ್ಲಿ ಬಳಸಬೇಕೆಂದು ಪ್ರಮುಖ ದಲಿತ ಸಂಘಟನೆಗಳು ತೀರ್ಮಾನಿಸಿವೆ ಎಂದರು.
ತೇಗೂರಿನಲ್ಲಿ ಗುರುತಿಸಲಾಗಿರುವ ಈ ಸರ್ಕಾರಿ ಭೂಮಿಯಲ್ಲಿ ವಿಶ್ವಜ್ಞಾನಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ಭಗವಾನ್ ಬುದ್ಧರ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಬುದ್ಧ ವಿಹಾರ ಆರಂಭಿಸಲಾಗಿದ್ದು ಇದೇ ಸ್ಥಳದಲ್ಲಿ ಅಂಬೇಡ್ಕರ್ ಜಯಂತಿ, ಬಸವ ಜಯಂತಿ, ಬುದ್ಧ ಪೂರ್ಣಿಮೆ ಆಚರಿಸುವ ಜೊತೆಗೆ ನಿರಂತರವಾಗಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ವಿಶ್ವ ಗುರು ಬಸವಣ್ಣ, ಕನಕದಾಸರ ಮೂರ್ತಿ ಪ್ರತಿಷ್ಠಾಪಿಸಲಾಗುವುದು, ಜೊತೆಗೆ ವಿಶ್ವ ಕವಿ ಕುವೆಂಪು ಒಳಗೊಂಡಂತೆ ಜಗತ್ತಿಗೆ ಬೆಳಕು ತೋರಿದ ಎಲ್ಲಾ ಮಹಾನ್ ದಾರ್ಶನಿಕರ ಸಂದೇಶಗಳನ್ನು ಸಾರುವ ಜ್ಞಾನ ಪ್ರಸಾರ ಕೇಂದ್ರವನ್ನಾಗಿಸಲು ಗುರಿ ಹೊಂದಲಾಗಿದೆ ಎಂದರು.
೨೦೨೩-೨೪ ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲೆಯ ಎಲ್ಲಾ ಜನಾಂಗದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲು ಇದೇ ತಿಂಗಳ ಅಂತ್ಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಧ್ಯಯನ ಸಂಸ್ಥೆಯಿಂದ ದೌರ್ಜನ್ಯ ತಡೆ ಸಮಿತಿ, ಧಾರ್ಮಿಕ ಸಮಿತಿ, ಸಾಂಸ್ಕೃತಿಕ ಸಮಿತಿ, ಶೈಕ್ಷಣಿಕ ಉಪ ಸಮಿತಿ ಸೇರಿದಂತೆ ಒಟ್ಟು ೫ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದ್ದು, ಅಂಬೇಡ್ಕರ್ ಅಧ್ಯಯನ ಸಂಸ್ಥೆಗೆ ಸದಸ್ಯರಾಗುವವರಿಗಾಗಿ ಸದಸ್ಯತ್ವ ಅಭಿಯಾನ ನಡೆಸಲು ಗುರಿ ಹೊಂದಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಸಂಘಟನೆಗಳ ಮುಖಂಡರುಗಳಾದ ದಂಟರಮಕ್ಕಿ ಶ್ರೀನಿವಾಸ್, ಮರ್ಲೆ ಅಣ್ಣಯ್ಯ, ಹುಣಸೇಮಕ್ಕಿ ಲಕ್ಷ್ಮಣ, ಮಲ್ಲೇಶ್ ಸ್ವಾಮಿ, ನಿಖಿಲ್ ಚಕ್ರವರ್ತಿ, ಹರಿಯಪ್ಪ, ರಘು ಮತ್ತಿತರರಿದ್ದರು.
B.B. Ningaiah President of Ambedkar Studies Institute press conference