ಚಿಕ್ಕಮಗಳೂರು: ಜಿಲ್ಲೆಯ ಮೂಲ ನಿವಾಸಿಗಳಿಗೆ ಭೂಮಿ ಹಂಚಿಕೆಯಾಗಬೇಕು ಹಾಗೂ ಎಲ್ಲಾ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎನ್ನುವುದು ಸೇರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಸಿಪಿಐ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಸ್.ಎಲ್.ರಾಧಾ ಸುಂದ್ರೇಶ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಚೆಗೆ ನಡೆದ ಪಕ್ಷದ ಜಿಲ್ಲಾ ಮಂಡಳಿ ಸಭೆಯಲ್ಲಿ ಮಲೆನಾಡು ಭಾಗದ ಭೂರಹಿತ ಮೂಲ ನಿವಾಸಿಗಳು ಹಾಗೂ ನಿವೇಶನ ರೈತರ ಬಗ್ಗೆ ಚರ್ಚಿಸಿಲಾಯಿತು ಎಂದರು.
ಮಲೆನಾಡು ಭಾಗದಲ್ಲಿ ಲಕ್ಷಾಂತರ ಎಕರೆ ಕಂದಾಯ ಭೂಮಿಯಿದ್ದು, ಇದರಲ್ಲಿ ಬಹುಭಾಗ ಜಾಗವನ್ನು ಶ್ರೀಮಂತ ಭೂಮಾಲೀಕರೇ ಒತ್ತುವರಿ ಮಾಡಿ ಅನುಭವಿಸುತ್ತಿದ್ದಾರೆ. ಈ ಮಧ್ಯೆ ಭೌಗೋಳಿಕವಾಗಿ ಮತ್ತು ಪ್ರಾಕೃತಿ ಸಂಪತ್ತಿನಿಂದಾಗಿ ಚಿಕ್ಕಮಗಳೂರು ಆಕರ್ಷಿತವಾಗುತ್ತಿದ್ದು, ಕೃಷಿಯ ಮೂಲವೇ ಅರಿಯದ ದೊಡ್ಡ ದೊಡ್ಡ ಬಂಡವಾಳಗಾರರು (ಹೊರ ಜಿಲ್ಲೆ ಮತ್ತು ಹೊರ ರಾಜ್ಯದ) ಭೂಮಿಯನ್ನು ಕೊಂಡು ಅನುಭವಿಸುತ್ತಿದ್ದಾರೆ ಎಂದರು.
ಸ್ಥಳೀಯವಾಗಿ ತಲತಲಾಂತರದಿಂದ ಮಲೆನಾಡಿನಲ್ಲಿ ವಾಸವಾಗಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಬಂದಿರುವ, ಅದರಲ್ಲಿ ಪ್ರಮುಖವಾಗಿ ದಲಿತ ವರ್ಗದ ಜನರು ತಮ್ಮ ಗ್ರಾಮಗಳಲ್ಲಿ ತಾವೇ ಪರಕೀಯರಾಗಿರುತ್ತಾರೆ ಎಂದರು.
ಈ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೇಸ್ ಸರ್ಕಾರ ಭೂಮಿಯ ಒಡೆತನವಿರುವ ಭೂಮಾಲೀಕರಿಗೆ ಭೂಮಿಯನ್ನು ನೀಡುವ ಉತ್ಸಾಹ ತೋರಿವೆ. ಆದರೆ ಸ್ಥಳೀಯ ಭೂಹೀನ ಬಡ ದಲಿತರ ಬಗ್ಗೆ ಯಾವುದೇ ಕಾಳಜಿ ಇದುವುದಿಲ್ಲ ಎಂದರು.
ಜಿಲ್ಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಮೂಡಿಗೆರೆ, ಚಿಕ್ಕಮಗಳೂರು ಎನ್.ಆರ್.ಪುರ, ಕೊಪ್ಪ ಮತ್ತು ತರೀಕೆರೆ ತಾಲ್ಲೂಕುಗಳಲ್ಲಿ ಕಾರ್ಮಿಕರು ಕೂಲಿ ಕೆಲಸ ಮಾಡಿಕೊಂಡು ಹಲವಾರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸುತ್ತಿರುವ ಲಕ್ಷಾಂತರ ಜನ ನಿವೇಶನ ರೈತರಿದ್ದು, ಈ ಬಗ್ಗೆ ಉಭಯ ಸರ್ಕಾರದ ಜನಪ್ರತಿನಿಧಿಗಳು ಬರಿ ಹೇಳಿಕೆಗಳ ಮುಖಾಂತರ ಕಾಲಹರಣ ಮಾಡದೇ, ನಿವೇಶನ ನೀಡುವುದಕ್ಕೆ ಮುಂದಾಗಬೇಕೆಂದು ಒತ್ತಾಯಿಸಿದರು.
ಗ್ರಾಮೀಣ ಮೂಲಭೂತ ಸೌಲಭ್ಯಗಳಾದ ರಸ್ತೆ, ನೀರು ಮತ್ತು ವಿದ್ಯುತ್ ಮುಂತಾದವುಗಳಿಗೇ ಗಮನ ಹರಿಸಲು ಒತ್ತಾಯಿಸಿ ಜಿಲ್ಲಾದ್ಯಾಂತ ಚಳುವಳಿ ನಡೆಸಲು ಪಕ್ಷವು ತೀರ್ಮಾನಿಸಿದೆ. ಅದರಂತೆ ಸೆಪ್ಟೆಂಬರ್ ತಿಂಗಳು ಜಿಲ್ಲಾದ್ಯಾಂತ ಮೊದಲನೇ ಹಂತವಾಗಿ ನಿವೇಶನ ರೈತರ ಮತ್ತು ಭೂಹೀನ ಮೂಲ ನಿವಾಸಿಗಳ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯದರ್ಶಿ ಜಿ.ರಘು ಇತರರು ಇದ್ದರು.
Land should be distributed to the original inhabitants of the district