ಚಿಕ್ಕಮಗಳೂರು: ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕಡೂರು ತಾಲೂಕು ಎಮ್ಮೆದೊಡ್ಡಿ ಅರಣ್ಯಭೂಮಿ ಒತ್ತುವರಿಯನ್ನು ಶನಿವಾರ ಬೆಳಿಗ್ಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ಮೂಲಕ ತೆರವುಗೊಳಿಸಲಾಯಿತು.
ಕಡೂರು ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಮಂಜುನಾಥ್ ಎಮ್ಮೆದೊಡ್ಡಿಯಲ್ಲಿ ೧೦ ಎಕರೆ ಅರಣ್ಯ ಭೂಮಿಯನ್ನು ಒತ್ತುವರಿಮಾಡಿಕೊಂಡಿದ್ದು, ಅಲ್ಲಿ ಕೆಲವು ಶೆಡ್ಗಳನ್ನು ನಿರ್ಮಿಸಿಕೊಳ್ಳಲಾಗಿತ್ತು. ಆ ಶೆಡ್ಗಳನ್ನು ಜೆಸಿಬಿ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಗೊಳಿಸಿದ್ದಾರೆ.
ಎಮ್ಮೆದೊಡ್ಡಿ ಸರ್ವೆ ನಂಬರ್ ೭೦ರಲ್ಲಿ ಒಟ್ಟು ೧೦ ಎಕರೆಯಲ್ಲಿ ನಿರ್ಮಿಸಿದ್ದ ಮನೆ, ಕುರಿಶೆಡ್, ಕೋಳಿ ಶೆಡ್ ಕೃಷಿ ಹೊಂಡ ಸೇರಿದಂತೆ ಹಲವನ್ನು ಜೆಸಿಬಿ ಮೂಲಕ ಬೆಳಿಗ್ಗೆ ೬ ಗಂಟೆಗೆ ಪೊಲೀಸರ ನೆರವಿನೊಂದಿಗೆ ಜಂಟಿಕಾರ್ಯಾಚರಣೆ ನೆಲಕ್ಕುರುಳಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ಬಾಬು ಸೂಚನೆ ಮೇರೆಗೆ ಎಸಿಎಫ್ ಮೋಹನ್ ಕಡೂರು ಆರ್ಎಫ್ಓ ರಜಾಕ್ ರದಾಫ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಕಡೂರು ಪೊಲೀಸರು ಹಾಜರಿದ್ದರು. ಒತ್ತುವರಿಯಾಗಿದ್ದ ಅರಣ್ಯ ಪ್ರದೇಶವನ್ನು ತೆರವುಗೊಳಿಸಲಾಗಿತ್ತು
ಎಮ್ಮೆದೊಡ್ಡಿಯಲ್ಲಿ ಅರಣ್ಯ ಪ್ರದೇಶ ಒತ್ತುವರಿಯಾಗಿರುವುದು ಕಂಡು ಬರುತ್ತಿದ್ದಂತೆ ಸ್ಥಳಕ್ಕೆ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಕೆ.ಎನ್.ರಮೇಶ್ ಅವರು ತೆರಳಿ ಪರಿಶೀಲಿಸಿದ್ದರು. ಶೆಡ್ಗಳಿಗೆ ಬೇರೆಯವರ ಹೆಸರಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಅವರುಗಳಿಗೆ ನೋಟೀಸ್ ಜಾರಿಗೊಳಿಸಲಾಗಿತ್ತು.
ಜನವರಿ ೧೬ ರಂದು ಜಿಲ್ಲಾಪಂಚಾಯಿತಿ ನಜೀರ್ಸಾಬ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಕೆಡಿಪಿ ಸಭೆಯಲ್ಲಿ ಎಮ್ಮೆದೊಡ್ಡಿ ಗ್ರಾಮದಲ್ಲಿ ಒತ್ತುವರಿಯಾಗಿರುವ ಅರಣ್ಯ ಭೂಮಿಯನ್ನು ೩೦ ದಿನದೊಳಗೆ ತೆರವುಗೊಳಿಸಬೇಕೆಂದು ಜನಪ್ರತಿನಿಧಿಗಳು ಒತ್ತಾಯಿಸಿದ್ದರು ಅದಕ್ಕೆ ಉಪರಣ್ಯ ಸಂರಕ್ಷಣಾಧಿಕಾರಿಗಳು ಸಮ್ಮತಿಸಿದ್ದರು.
ಜಿಲ್ಲಾಪಂಚಾಯಿತಿಯಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಸಮ್ಮುಖದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಒತ್ತುವರಿ ವಿಷಯ ಪ್ರಸ್ತಾಪವಾಯಿತು. ಒತ್ತುವರಿ ವಿಷಯದಲ್ಲಿ ಬಡವರಿಗೊಂದು, ಬಲ್ಲಿದರಿಗೊಂಡು ಕಾನೂನೇ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಕೇಳಿದ್ದರು.
ಒಂದೇ ದಿನದಲ್ಲಿ ತೆರವುಗೊಳಿಸಲು ಮುಂದಾಗದಿದ್ದರೆ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಆಗ್ರಹಿಸಿದ್ದರು. ೪೮ ಗಂಟೆಯೊಳಗೆ ಒತ್ತುವರಿ ತೆರವುಗೊಳಿಸುವಂತೆ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಡಿಎಫ್ಓ ಅವರಿಗೆ ಸೂಚಿಸಿದ್ದರು.
ಇದರಿಂದ ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯ ಅಧಿಕಾರಿಗಳು ಎಮ್ಮೆದೊಡ್ಡಿಯಲ್ಲಿ ಒತ್ತುವರಿಯಾಗಿದ್ದ ಅರಣ್ಯ ಪ್ರದೇಶ ಮತ್ತು ಆಜಾಗದಲ್ಲಿ ನಿರ್ಮಾಣಗೊಂಡಿದ್ದ ಶೆಡ್ಗಳನ್ನು ಶನಿವಾರ ಬೆಳಿಗ್ಗೆಯೇ ಪೊಲೀಸರ ನೆರವಿನೊಂದಿಗೆ ತೆರವುಗೊಳಿಸಲಾಯಿತು.
Clearance of Emmedoḍḍi encroachment on forest land