ಚಿಕ್ಕಮಗಳೂರು: ವಾರಾಂತ್ಯದಲ್ಲಿ ಮುಳ್ಳಯ್ಯನಗಿರಿ ಮತ್ತು ದತ್ತಪೀಠಕ್ಕೆ ಆಗಮಿಸಿದ ಪ್ರವಾಸಿಗರಿಗೆ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಚಿಕ್ಕಮಗಳೂರು ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ವಾಹನ ತಪಾಸಣೆ ಮಾಡುವ ಮೂಲಕ ಪ್ರವಾಸಿಗರಿಗೆ ಶಾಕ್ ನೀಡಿದ್ದಾರೆ.
ರಾಜ್ಯದ ನೆಚ್ಚಿನ ಪ್ರವಾಸಿಕೇಂದ್ರದಲ್ಲಿ ಮುಳ್ಳಯ್ಯನಗಿರಿ ಪರ್ವತ ಶ್ರೇಣಿಯೂ ಒಂದಾಗಿದ್ದು ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿಗೆ ಲಗ್ಗೆ ಇಡುತ್ತಿದ್ದಾರೆ. ಆಗಮಿಸುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಎಲ್ಲದರಲ್ಲಿ ಬಿಸಾಡುವುದರಿಂದ ಪ್ರವಾಸಿ ಕೇಂದ್ರ ಕಸದ ಕೊಂಪೆಯಾಗುತ್ತಿದ್ದು ಗಿರಿ ಪ್ರದೇಶದಲ್ಲಿ ಪ್ಲಾಸ್ಟಿಕ್ ಸೇರಿದಂತೆ ಇತರೆ ಅನುಪಯುಕ್ತ ವಸ್ತುಗಳ ಬಳಕೆಯನ್ನು ಈಗಾ ಗಲೇ ನಿಷೇಧಿಸಲಾಗಿದೆ.
ಈ ಹಿನ್ನಲೆಯಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ತಪಾಸಣೆಗೆ ಮುಂದಾಗಿದ್ದು, ನೀರಿನ ಬಾಟಲಿ, ಮದ್ಯದ ಬಾಟಲಿ, ಸಿಗರೇಟ್ ಸೇರಿದಂತೆ ಇತರೆ ವಸ್ತುಗಳನ್ನು ಕೈಮರದಲ್ಲಿನ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ನಡೆಸಿ ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ. ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರ ಹುಚ್ಚಾಟ, ತರಲೆ, ಕೀಟಲೆ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಫುಲ್ ಅಲರ್ಟ್ ಆಗಿದ್ದು ಈಗಾಗಲೇ ಅನೇಕರ ಮೇಲೆ ಕೇಸ್ ಕೂಡ ದಾಖಲು ಮಾಡಲಾಗಿದೆ.
ಶನಿವಾರ ಗಿರಿ ಪ್ರದೇಶಕ್ಕೆ ತೆರಳು ಸಾವಿರಾರು ಸಂಖ್ಯೆಯ ಪ್ರವಾಸಿಗರು ಆಗಮಿಸಿದ್ದು, ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಅವರು ವಾಹನ ತಪಾಸಣೆಗೆ ಇಳಿದರು.
ಮುಳ್ಳಯ್ಯನಗಿರಿ, ಶ್ರೀ ಗರು ದತ್ತಾತ್ರೇಯ ಬಾಬಾ ಬುಡನ್ ದರ್ಗಾ, ಮಾಣಿಕ್ಯಧಾರ ಹೋಗುವ ಮಾರ್ಗದ ಕೈಮರ ಚಕ್ ಪೋಸ್ಟ್ ನಲ್ಲಿ ಪ್ರವಾಸಿಗರ ವಾಹನಗಳಲ್ಲಿದ್ದ ಸಾವಿರಾರು ರೂ.ಮೌಲ್ಯದ ಮದ್ಯ ಸೀಜ್ ಮಾಡಿ ಪ್ರಕರಣ ದಾಖಲಿಸುವ ಮೂಲಕ ಪ್ರವಾಸಿಗರ ಬೆವರು ಇಳಿಸುವ ಕೆಲಸ ಮಾಡಿದ್ದಾರೆ.
ಒಟ್ಟಾರೆ ಜಿಟಿ ಜಿಟಿ ಮಳೆಯಲ್ಲಿ ನೆನೆದು ಸುಂದರ ಪ್ರವಾಸಿ ತಾಣಗಳಲ್ಲಿ ಕುಳಿತು ಹಾಟ್ ಹಾಟ್ ಆಗಿ ಎಣ್ಣೆ ಹೊಡಿಯೋಣ ಅಂತ ಬಂದ ಪ್ರವಾಸಿಗರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಕ್ ನೀಡಿದ್ದಾರೆ.
ಚಿಕ್ಕಮಗಳೂರು ಅಡ್ವೆಂಚರ್ ಸ್ಫೋರ್ಟ್ಸ್ ಕ್ಲಬ್ನ ನಳಿನಾ ಡೀಸಾ, ರುಬೀನ್ ಮೂಸಸ್ ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.
District Superintendent of Police inspects vehicles on the way to Giri