ಚಿಕ್ಕಮಗಳೂರು: ಅತಿವೃಷ್ಠಿಯಿಂದ ಹಾನಿಗೊಳಗಾದ ಮನೆಗಳಿಗೆ ತುರ್ತು ಪರಿಹಾರವನ್ನು ಒದಗಿಸಿ ಸಂತ್ರಸ್ತ ಕುಟುಂಬಗಳ ಸಮಸ್ಯೆಗೆ ಪ್ರತಿಯೊಬ್ಬ ಅಧಿಕಾರಿಗಳು ಸ್ಪಂದಿಸಬೇಕೆಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿರುವ ಕೆಸ್ವಾನ್ನಲ್ಲಿ ಇಂದು ಪ್ರಕೃತಿ ವಿಕೋಪದಿಂದ ಉಂಟಾದ ಹಾನಿಯ ಕುರಿತು ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯಾದ್ಯಂತ ಬಾರಿ ಹೆಚ್ಚು ಮಳೆಯಾಗುತ್ತಿದ್ದು, ಮಳೆಯಿಂದ ಮನೆಗಳು, ಜಾನುವಾರುಗಳಿಗೆ ತೊಂದರೆಯಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಗುರುತಿಸಿ ಶೀಘ್ರವಾಗಿ ಪರಿಹಾರ ಒದಗಿಸಬೇಕು ಹಾಗೂ ಯಾವುದೇ ರೀತಿಯ ಗೋಡೆ, ಮೇಲ್ಛಾವಣಿ ಕುಸಿದು ಭಾಗಶಃ ಹಾನಿಗೊಳಗಾಗಿದ್ದರೆ ಅಂತಹ ಮನೆಗಳನ್ನು ಗುರುತಿಸಿ ಪರಿಶೀಲಿಸಿ ಶೇಕಡವಾರು ಪರಿಹಾರ ನೀಡದೆ ಪೂರ್ಣ ಪ್ರಮಾಣದ ಪರಿಹಾರ ಒದಗಿಸಿಕೊಡಬೇಕು.
ಗುಡ್ಡ ಪ್ರದೇಶಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಪಾಯದಲ್ಲಿದ್ದರೆ ಅಂತಹ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಮಟ್ಟದಲ್ಲಿ ಪಿ.ಡಿ.ಒ.ಗಳು ಹಾಗೂ ಆಪ್ತಮಿತ್ರ ತಂಡದವರು ಜೊತೆಗೂಡಿ ಸಂತ್ರಸ್ತರ ನೆರವಿಗೆ ಸಹಕರಿಸಬೇಕು ಮತ್ತು ಮನೆ ಕಳೆದುಕೊಂಡು ನಿರಾಶ್ರಿತರಾದ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆದು ಆಶ್ರಯ ನೀಡಬೇಕು ಎಂದರು.
ಯಾವುದೇ ರೀತಿಯ ಹಾನಿ ಉಂಟಾದಲ್ಲಿ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಸಂಪರ್ಕದಲ್ಲಿದ್ದು, ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಬೇಕು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅವರ ಸಮಸ್ಯೆಗಳಿಗೆ ಪ್ರತಿಯೊಬ್ಬರು ಸ್ಪಂದಿಸಬೇಕು ಎಂದ ಅವರು ಮಳೆ ಹಾಗೂ ಪ್ರವಾಹವನ್ನು ಎದುರಿಸಲು ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ಮಾತನಾಡಿ ಅಪಾಯದ ಮುನ್ಸೂಚನೆ ಇರುವ ಪ್ರದೇಶ ಹಾಗೂ ಮನೆಗಳನ್ನು ಗುರುತಿಸಿ ಅವರನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಂಡಗಳನ್ನು ರಚಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಯಾವುದೇ ಪ್ರದೇಶದಲ್ಲಿ ಹಾನಿ ಉಂಟಾದರು ತಕ್ಷಣ ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಅಪಾಯ ಸಂಭವಿಸಬಹುದಾದ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬಾರದಂತೆ ನಿರ್ಬಂಧಿಸಲಾಗಿದೆ. ಪ್ರವಾಹ ಹಾಗೂ ಮಳೆಯಿಂದ ಸಂಭವಿಸಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮ್ಟೆ ಮಾಹಿತಿ ನೀಡಿ ಹಾಸನ ಜಿಲ್ಲೆಯ ಸಂಪಾಜೆ ರಸ್ತೆಯ ಗುಡ್ಡ ಕುಸಿತದಿಂದಾಗಿ ಆ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿರುವುದರಿಂದ ಬಾರಿ ತೂಕದ ವಾಹನಗಳು ಚಾರ್ಮಾಡಿ ರಸ್ತೆಯ ಮೂಲಕ ಸಂಚರಿಸುತ್ತಿದ್ದು, ಬಾರಿ ವಾಹನಗಳ ಸಂಚಾರದಿಂದ ಅಡಚಣೆಯುಂಟಾಗುತ್ತಿದೆ. ಹಾಗಾಗಿ ಬಾರಿ ವಾಹನಗಳ ಸಂಚಾರವನ್ನು ನಿಷೇಧಿಸಲು ಕ್ರಮವಹಿಸುವಂತೆ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು ಅಗತ್ಯ ವಸ್ತುಗಳ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು ಮಾತನಾಡಿ ಪ್ರಸ್ತುತ ಜಿಲ್ಲೆಯಲ್ಲಿ ೨೬ ಡೆಂಗ್ಯೂ ಪ್ರಕರಣಗಳು ಸಕ್ರಿಯದಲ್ಲಿದೆ. ಕಳೆದ ತಿಂಗಳಿಗಿಂತ ಶೇಕಡ ೫೦ರಷ್ಟು ಡೆಂಗ್ಯೂ ಪ್ರಕರಣಗಳು ಕಡಿಮೆಯಾಗಿದೆ. ಸಾರ್ವಜನಿಕರಲ್ಲಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸಿ ಡೆಂಗ್ಯೂ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್, ತರೀಕೆರೆ ಉಪ ವಿಭಾಗಾಧಿಕಾರಿ ಕಾಂತರಾಜ್, ಎಲ್ಲಾ ತಾಲೂಕು ತಹಶೀಲ್ದಾರ್ಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Provide emergency relief to flood-damaged houses