ಚಿಕ್ಕಮಗಳೂರು: ಮಲೆನಾಡಿನ ಚಿಕ್ಕಮಗಳೂರು ಸೇರಿ ಮಳೆಯಾಗುತ್ತಿದ್ದು, ಅವಾಂತರವೇ ಸೃಷ್ಟಿಯಾಗಿದೆ. ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕವೊಂದು ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಮೇಗೂರು ಗ್ರಾಮದಲ್ಲಿ ಮನೆಯ ಮುಂಭಾಗವೇ ೩೦ ಅಡಿ ಆಳದ ಕಂದಕ ಸೃಷ್ಟಿಯಾಗಿದೆ.
ಗ್ರಾಮದ ಪ್ರೇಮ ಬಾಬು ಗೌಡ ಎಂಬುವವರ ಮನೆ ಮುಂದೆ ಕಂದಕ ಸೃಷ್ಟಿಯಾಗಿದ್ದು, ವಿಚಿತ್ರ ಕಂದಕ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಕಂದಕದ ಒಳಗಿಂದ ಭೂಮಿ ಒಳಗೆ ನೀರಿನ ಬುಗ್ಗೆ ಹರಿಯುತ್ತಿದೆ. ಬಾವಿ ಆಕಾರದಲ್ಲಿ ಕಂದಕ ಸೃಷ್ಟಿಯಾಗಿದೆ.
ಚಿಕ್ಕಮಗಳೂರಿನಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜನ-ಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ಮನೆಯ ಹಿಂಭಾಗದಲ್ಲಿ ಭೂ ಕುಸಿತ ಉಂಟಾಗಿದೆ. ಕಳಸ ತಾಲೂಕಿನ ಮಾವಿನಕೆರೆ ಕಲ್ಲಾನೆಯಲ್ಲಿ ಘಟನೆ ನಡೆದಿದೆ. ಕಲ್ಲಾನೆಯ ಬಾಸ್ಕರ್ ಪೂಜಾರಿ ಎಂಬುವವರು ಕಂಗಲಾಗಿದ್ದಾರೆ. ಮಳೆ ಹೆಚ್ಚಾದಂತೆ ಸ್ವಲ್ಪ ಸ್ವಲ್ಪವೇ ಭೂಮಿ ಕುಸಿಯುತ್ತಿದೆ.
ಪ್ರಪಾತಕ್ಕೆ ಬಿದ್ದ ಲಾರಿ, ಚಾಲಕ ಗ್ರೇಟ್ ಎಸ್ಕೆಪ್
ಚಿಕ್ಕಮಗಳೂರಿನಲ್ಲಿ ಲಾರಿ ಚಾಲಕರೊಬ್ಬರು ಗ್ರೇಟ್ ಎಸ್ಕೆಪ್ ಆಗಿದ್ದಾರೆ. ಲಾರಿ ಪ್ರಪಾತಕ್ಕೆ ಬಿದ್ದರೂ ಅದೃಷ್ಟವಶಾತ್ ಚಾಲಕ ಬದುಕುಳಿದಿದ್ದಾರೆ. ನಿರಂತರ ಮಳೆಗೆ ನೆಮ್ಮಾರು ಸಮೀಪದ ರಸ್ತೆ ಕುಸಿದು, ಲಾರಿಯೊಂದು ಸುಮಾರು ೫೦ ಅಡಿ ಆಳದಲ್ಲಿ ಬಿದ್ದಿದೆ. ಲಾರಿ ಸಂಪೂರ್ಣ ನಜ್ಜು-ಗುಜ್ಜಾಗಿದ್ದು, ಚಾಲಕ ಪವಾಡ ಸದೃಶ ಪಾರಾಗಿದ್ದಾರೆ. ಶೃಂಗೇರಿ ನೆಮ್ಮಾರು ಬಳಿ ರಸ್ತೆ ಕುಸಿದ ಪರಿಣಾಮ ಲಾರಿಯು ಪ್ರಪಾತಕ್ಕೆ ಬಿದ್ದಿದೆ. ನೆಮ್ಮಾರು ವ್ಯಾಪ್ತಿಯ ಹೊಸದೇವರಹಡು ಸಮೀಪದಲ್ಲಿ ಘಟನೆ ನಡೆದಿದೆ.
ನಿದ್ರೆಗೆ ಜಾರಿದಾಗ ಮನೆ ಮೇಲೆ ಬಿದ್ದ ಬೃಹತ್ ಮರ
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರಿಕಟ್ಟೆ ಸುತ್ತಮುತ್ತ ಅಪಾಯದ ಮಟ್ಟ ಮೀರಿ ಹಳ್ಳ ಕೊಳ್ಳಗಳು ಹರಿಯುತ್ತಿದ್ದು, ಬಸರಿ ಕಟ್ಟೆ -ಬಿಲಾಳು ಕೊಪ್ಪ ರಸ್ತೆಯು ಜಲಾವೃತಗೊಂಡಿದೆ. ಇತ್ತ ಅಜ್ಜಂಪುರ ತಾಲೂಕಿನ ಗುಡ್ಡದಹಳ್ಳಿ ಗ್ರಾಮದಲ್ಲಿ ಭಾರಿ ಗಾಳಿ- ಮಳೆಗೆ ಮನೆಯ ಮೇಲೆ ಬೃಹತ್ ಗಾತ್ರದ ಮರ ಉರುಳಿ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕುಟುಂಬಸ್ಥರು ಮನೆಯಿಂದ ಎದ್ದು ಓಡಿದ್ದಾರೆ. ಕುಟುಂಬಸ್ಥರು ನಿದ್ದೆಯಲ್ಲಿದ್ದಾಗ ಏಕಾಏಕಿ ಮರ ಬಿದ್ದು, ಚಾವಣಿ ಸಂಪೂರ್ಣ ಹಾನಿಯಾಗಿದೆ. ಗ್ರಾಮದ ರವಿ ಎಂಬುವರಿಗೆ ಸೇರಿದ ಮನೆಯವರು ಪಾರಾಗಿದ್ದಾರೆ.
ಕೊಚ್ಚಿ ಹೋದ ಅಡಿಕೆ ತೋಟ
ಭದ್ರಾ ನದಿ ಪ್ರವಾಹದಿಂದ ತೋಟ-ಗೆದ್ದೆಗಳು ಜಲಾವೃತಗೊಂಡಿದೆ. ಮಹಾಮಳೆಗೆ ಅರ್ಧ ಎಕರೆ ಅಡಿಕೆ ತೋಟ ಕೊಚ್ಚಿ ಹೋಗಿದೆ. ಕಳಸ ತಾಲೂಕಿನ ಮಕ್ಕಿಮನೆಯ ನಾಗೇಂದ್ರ ಎಂಬುವರಿಗೆ ಸೇರಿದ ತೋಟದಲ್ಲಿ ಮಣ್ಣು ಕುಸಿತವಾಗಿ ಅರ್ಧ ಎಕರೆ ಅಡಿಕೆ ಗಿಡಗಳು ಮಣ್ಣುಪಾಲಾಗಿದೆ. ನಡ್ಲುಮನೆಯ ವರ್ಧಮಾನಯ್ಯ ಎಂಬುವವರ ೩ ಎಕರೆ ನಾಟಿ ಮಾಡಿದ ಭತ್ತದ ಗದ್ದೆ ಜಲಾವೃತವಾಗಿದೆ.
A 30 feet deep trench was created in front of the house in Meguru village