ಚಿಕ್ಕಮಗಳೂರು: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣಗಳು ಜುಲೈ ಮಾಹೆಯಲ್ಲಿ ಇಳಿಮುಖವಾಗುತ್ತಿದ್ದು, ಡೆಂಗ್ಯೂವಿನಿಂದ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್ಬಾಬು ಸ್ಪಷ್ಟಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಕ್ಕೆ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು ಜನವರಿಯಿಂದ ಜು.೧೮ ರವರೆಗೆ ಜಿಲ್ಲೆಯಲ್ಲಿ ೬೩೦ ದೃಢೀಕೃತ ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೨೬ ಡೆಂಗ್ಯೂ ಸಕ್ರಿಯ ಪ್ರಕರಣಗಳಾಗಿವೆ ಎಂದರು.
ಸಿಂಧಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ದೇವಗೊಂಡನಹಳ್ಳಿ ಗ್ರಾಮದಲ್ಲಿ ಇಲಿ ಜ್ವರ ಹಾಗೂ ಕೀಲುನೋವುಗಳ ಪ್ರಕರಣಗಳು ಇದೆ ಎಂದು ವರದಿಯಾಗಿದ್ದು ಆ ಗ್ರಾಮದಲ್ಲಿ ೩೫೭ ಮನೆಗಳಿದ್ದು ೧೪೨೧ ಜನಸಂಖ್ಯೆ ಹೊಂದಿದೆ. ಅರೋಗ್ಯ ಇಲಾಖೆ ಸಿಬ್ಬಂದಿ ೬ ಕ್ಷಿಪ್ರ ತಂಡ ರಚಿಸಿ ಭೇಟಿನೀಡಿ ಲಾರ್ವಾ ಸಮೀಕ್ಷೆ, ಸೊಳ್ಳೆ ನಿರ್ಮೂಲನಾ ಕಾರ್ಯವನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟು ೨೪ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಡಿಪಿಹೆಚ್ಎಲ್ ಲ್ಯಾಬ್ಗೆ ಕಳುಹಿಸಲಾಗಿದ್ದು, ವರದಿಯಲ್ಲಿ ೪ ಚಿಕೂನ್ ಗುನ್ಯಾ ಜ್ವರ ಪ್ರಕರಣ, ೧ ಡೆಂಗ್ಯೂ ಪ್ರಕರಣ ಪತ್ತೆಯಾಗಿದ್ದು, ಈ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಮಟ್ಟದಿಂದ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳು ಹಾಗೂ ಮೇಲ್ವಿಚಾರಣಾ ತಂಡ ಗ್ರಾಮಕ್ಕೆ ಭೇಟಿನೀಡಿ ಲಾರ್ವಾ ಸಮೀಕ್ಷೆಯ ಅಡ್ಡ ಪರೀಕ್ಷೆಯನ್ನು ನಡೆಸಿ ಅಲ್ಲಿನ ಸಿಬ್ಬಂದಿಯವರಿಗೆ ಗುಣಾತ್ಮಕ ಹಾಗೂ ಪರಿಣಾಮಕಾರಿ ಲಾರ್ವಾ ಸಮೀಕ್ಷೆ ನಡೆಸಿ ಜ್ವರ ಪ್ರಕರಣಗಳ ರೋಗಿಗಳನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಕಂಟ್ರೋಲ್ ರೂಂ ಸ್ಥಾಪನೆ ಮಾಡಲಾಗಿದ್ದು, ಇದಕ್ಕಾಗಿ ದೂರವಾಣಿ, ಸಹಾಯವಾಣಿಯ ೯೪೪೮೯೦೭೯೦೯ ಈ ಸಂಖ್ಯೆಯನ್ನು ಆರಂಭಿಸಲಾಗಿದೆ. ಡೆಂಗ್ಯೂ ಸೇರಿದಂತೆ ಯಾವುದೇ ರೀತಿಯ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಿಂದ ಹೊರಬರಲಾಗದವರು ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದ ಅವರು, ತಾಲೂಕು ಆರೋಗ್ಯಾಧಿಕಾರಿಗಳು, ಪಿಹೆಚ್ಸಿಗಳಲ್ಲಿಯೂ ಡೆಂಗ್ಯೂ ಕಂಟ್ರೋಲ್ ರೂಂ ಸ್ಥಾಪನೆ ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆಂದು ತಿಳಿಸಿದರು.
ಈ ಸಂಖ್ಯೆಗೆ ಬರುವ ಕರೆಗಳನ್ನು ದಾಖಲಿಸಿಕೊಂಡು ಜ್ವರದ ಲಕ್ಷಣ ಮತ್ತು ನಿಯಂತ್ರಣ ಕ್ರಮಗಳ ಬಗ್ಗೆ ಪೂರ್ಣ ಮಾಹಿತಿಯನ್ನು ಒದಗಿಸಲಾಗುವುದು.ಡೆಂಗ್ಯೂ ಪ್ರಕರಣ ಕಂಡುಬಂದರೆ ಸಮಸ್ಯಾತ್ಮಕ ನಗರ ಮತ್ತು ಹಳ್ಳಿಗಳಲ್ಲಿ ನಿರಂತರ ಲಾರ್ವಾ ಸರ್ವೆ ಜೊತೆಗೆ ೬ ವಾರಗಳ ವಿಶೇಷ ಲಾರ್ವಾ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಿಟಿಓ ಡಾ. ಹರೀಶ್ಬಾಬು, ಆರ್ಸಿಹೆಚ್ ಡಾ. ಮಂಜುನಾಥ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
Dengue cases are on the decline in Chikmagalur district