ಚಿಕ್ಕಮಗಳೂರು: ತಮ್ಮ ಹಗರಣ ಮುಚ್ಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಬ್ಲಾಕ್ ಮೇಲ್ ತಂತ್ರಕ್ಕೆ ಮುಂದಾಗಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ನಡೆ ನಾನು ಹಗರಣ ಮಾಡಿದ್ದೇನೆ. ನಿಮ್ಮ ಹಗರಣ ಹೊರ ತೆಗಿಯುತ್ತೇನೆ ಎನ್ನುವಂತಿದೆ. ಇದು ಆಶ್ಚರ್ಯ ಹಾಗೂ ಹಾಸ್ಯಾಸ್ಪದ ಎಂದು ಹೇಳಿದರು.
ವಾಲ್ಮೀಕಿ ನಿಗಮ ಹಾಗೂ ಮೂಡ ಹಗರಣ ಹೊರಬರುವವರೆಗೂ ಬಿಜೆಪಿ ಹಗರಣಗಳು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದ ಅವರು ನಿಮ್ಮದೇ ಸರ್ಕಾರ ಇರುವಾಗ ಬಿಜೆಪಿ ಹಗರಣಗಳ ಬಗ್ಗೆ ಇದುವರೆಗೆ ಏಕೆ ತನಿಖೆ ನಡೆಸಲಿಲ್ಲ. ನಿಮ್ಮ ಕಾಲ ಬುಡಕ್ಕೆ ಬಂದಾಗ ಬಿಜೆಪಿ ಬಗ್ಗೆ ದೂರುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಕಾಮಗಾರಿಯಲ್ಲಿ ೧೧ಕೋಟಿ ಅವ್ಯವಹಾರ ಆಗಿದೆ ಎಂದು ಸಿಎಂ ಹೇಳಿದ್ದಾರೆ. ಆದರೆ ಇದುವರೆಗೆ ಸರ್ಕಾರ ೧೧ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿಯೇ ಇಲ್ಲ. ಹೀಗಿರುವಾಗ ಅವ್ಯವಹಾರ ಮಾಡಲು ಹೇಗೆ ಸಾಧ್ಯವಾಗುತ್ತದೆ. ಸದನದ ಒಳಗೆ ಹೀಗೆ ಇಷ್ಟೊಂದು ಸುಳ್ಳನ್ನು ಹೇಳುವ ಮುಖ್ಯಮಂತ್ರಿಯನ್ನು ಎಂದು ಕಂಡಿಲ್ಲ ಎಂದು ದೂರಿದರು.
ಒಂದು ವೇಳೆ ಬಿಜೆಪಿ ಅವ್ಯವಹಾರ ಮಾಡಿದ್ದರೆ ಯಾವುದೇ ತನಿಖೆಯನ್ನಾದರೂ ಮಾಡಲಿ. ಸಿಬಿಐ, ಸಿಐಡಿ, ಇಂಟರ್ ಪೋಲ್ ಯಾವುದಾದರೂ ತನಿಖೆ ನಡೆಸಿ ಎಂದು ಸವಾಲು ಹಾಕಿದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಉತ್ತರ ಕನ್ನಡ ಜಿಲ್ಲೆಯ ಶಿರೂರಿಗೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ನಡೆಸಿದ್ದನ್ನು ಕಾಂಗ್ರೆಸ್ ಟೀಕೆ ಮಾಡುತ್ತದೆ. ಇದರಿಂದ ಕಾಂಗ್ರೆಸ್ ಪ್ರಾಕೃತಿಕ ವಿಕೋಪ, ಸಾವು ನೋವನ್ನು ಯಾವ ರೀತಿ ಸ್ವೀಕಾರ ಮಾಡಿದೆ ಎನ್ನುವುದು ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಜನರ ಬಗ್ಗೆ ಯಾವ ವಿಚಾರದಲ್ಲೂ ಕಾಂಗ್ರೆಸ್ ಗೆ ನೈಜ ಕಾಳಜಿ ಇಲ್ಲ. ಮಳೆ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಬೇಕಿತ್ತು. ಆದರೆ ಇದುವರೆಗೂ ಯಾವೊಬ್ಬ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿಲ್ಲ. ಆದರೆ ಕೇಂದ್ರ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದನ್ನೇ ಟೀಕೆ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ಸಿನ ಮಾನಸಿಕತೆ ಎಂದು ದೂರಿದರು.
ಹಗರಣಗಳಲ್ಲಿ ಮುಳುಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನ ಸತ್ತರೇನು ಬಿಟ್ಟರೇನು ಎನ್ನುವ ಮನಸ್ಥಿತಿ ಇದೆ. ಜನರ ಸಾವಿನ ಬಗ್ಗೆಯೂ ಅನುಕಂಪ ತೋರಿಸದೆ ಇರುವ ಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ದುರಂತ. ಯಾವುದೇ ವಿಚಾರಕ್ಕೂ ರಾಜ್ಯ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Blackmail from CM to cover up his scam