ಚಿಕ್ಕಮಗಳೂರು: ತಾಲೂಕಿನ ಗವನಹಳ್ಳಿ ಸರ್ವೆ ಸಂಖ್ಯೆ ೯೩ ರಲ್ಲಿ ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮ ಖಾತೆ ಮಾಡಿಕೊಟ್ಟಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಆ.೧೫ ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶನ ಮತ್ತು ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಒಕ್ಕೂಟದ ಮುಖಂಡರುಗಳು, ತಾಲೂಕಿನ ಕಸಬಾ ಹೋಬಳಿ ಗವನಹಳ್ಳಿ ಗ್ರಾಮದ ಸರ್ವೆ ನಂಬರ್ ೯೨ರಲ್ಲಿ ಕೆಲವು ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಜಮೀನನ್ನು ಖರೀದಿಸಲು ಕ್ರಯ ಒಪ್ಪಂದ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳು ಈ ಸರ್ವೆ ನಂಬರ್ನ ಪಕ್ಕದ ಜಮೀನನ್ನು ಬದಲಾವಣೆ ಮಾಡಿಕೊಂಡು ಸರಕಾರಿ ಜಮೀನನ್ನು ಕಬಳಿಸುವ ಹುನ್ನಾರ ನಡೆಸುತ್ತಿದ್ದರು.
ಅದಕ್ಕೆ ಅವಕಾಶ ನೀಡದಂತೆ ಕ್ರಮಕೈಗೊಳ್ಳಲು ದಲಿತ ಸಂಘಟನೆಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಳೆದ ವರ್ಷ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ, ಸಚಿವರು ಜಮೀನು ಕಬಳಿಕೆ ಯತ್ನ ತಡೆಯಲಿಲ್ಲ. ನಮ್ಮ ಮನವಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ಕ್ರಯಪತ್ರ ಒಪ್ಪಂದ ಮಾಡಿಕೊಂಡಿರುವ ರಿಯಲ್ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳು ಸ.ನಂ.೯೨ ರ ಹಿಡುವಳಿ ಜಮೀನಿಗೆ ಬದಲಾಗಿ ದಲಿತ ಜಮೀನುದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಸ.ನಂ. ೯೩ರ ಸರಕಾರಿ ಜಮೀನನ್ನು ಬದಲಾವಣೆ ಮಾಡಿಕೊಂಡು ಇತ್ತೀಚೆಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ತಹಸೀಲ್ದಾರ್ ಮತ್ತು ಎಡಿಎಲ್ಆರ್ ಅವರು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ವ್ಯಕ್ತಿಗಳಿಗೆ ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ. ಈ ರೀತಿ ಸರಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿರುವ ತಹಸೀಲ್ದಾರ್, ಎಡಿಎಲ್ಆರ್ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ಮಾಡಿರುವ ಖಾತೆ ರದ್ದುಮಾಡಿ ಸರಕಾರಿ ಜಮೀನಾಗಿ ಮರುಸ್ಥಾಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಕೆ.ಸಿ.ವಸಂತ್ಕುಮಾರ್, ಮರ್ಲೆ ಅಣ್ಣಯ್ಯ, ಬಾಲಕೃಷ್ಣ, ಲಕ್ಷ್ಮಣ, ಹೊನ್ನೇಶ್ ಮತ್ತಿತರರಿದ್ದರು.
On August 15 the district in-charge minister will display the black flag