ಚಿಕ್ಕಮಗಳೂರು: ಎಸ್ಸಿಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ ಹಣ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರಕಾರದ ವಿರುದ್ಧ ಜು.೨೬ ರಂದು ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಕೃಷ್ಣ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ೩೨ ಸಾವಿರ ಕೋಟಿ ರೂ.ಗಳನ್ನು ರಾಜ್ಯ ಸರಕಾರ ೫ ಗ್ಯಾರಂಟಿ ಯೋಜನೆಗಳಿಗೆ ಬಳಸಿರುವುದಾಗಿ ಹೇಳಿದೆ.
ಇದಕ್ಕೆ ರಾಜ್ಯಾದ್ಯಂತ ದಲಿತ ಸಂಘಟನೆಗಳಿಂದ ವಿರೋಧ ವ್ಯಕ್ತವಾದರೂ ಸಹ ಸರಕಾರ ಇತ್ತ ಕಿವಿಗೊಡದೆ ನಿರ್ಲಕ್ಷ್ಯ ತಾಳಿದೆ.
ಎಸ್ಸಿ, ಎಸ್ಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಸಬಾರದು ಎಂದು ಇದೇ ಕಾಂಗ್ರೆಸ್ ಸರಕಾರ ಕಾಯಿದೆ ಮಾಡಿದ್ದರೂ ಕೂಡ ಅದನ್ನೆಲ್ಲಾ ಗಾಳಿಗೆ ತೂರಿ ಇಂದು ಗ್ಯಾರಂಟಿ ಯೋಜನೆಗಳಿಗೆ ಹಣ ಬಳಸಿಕೊಂಡಿರುವುದು ಖಂಡನೀಯ ಎಂದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಮಾತನಾಡಿ, ಮಹರ್ಷಿ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿದ್ದ ೧೮೭ ಕೋಟಿ ರೂ.ಗಳನ್ನು ಈ ಸರಕಾರ ದುರ್ಬಳಕೆ ಮಾಡಿಕೊಂಡಿದೆ. ಮತ್ತೆ ನಿಗಮದ ಖಾತೆಗೆ ಹಣ ವಾಪಸ್ಸು ಹಾಕಿಸಲಾಗಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ಸರಕಾರಿ ಮತ್ತು ಬ್ಯಾಂಕಿನ ಅಧಿಕಾರಿಗಳು, ಮಾಜಿ ಸಚಿವ, ಶಾಸಕರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಜು.೨೬ ರಂದು ಜಿಲ್ಲಾ ಕೇಂದ್ರದ ಆಜಾದ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ದಲಿತಪರ ಸಂಘಟನೆಗಳ ಮುಖಂಡರು, ಕನ್ನಡ ಸೇನೆ ಮತ್ತಿತರ ಸಂಘಟನೆಗಳು ಬೆಂಬಲಿಸಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್ಪಿ ಮುಖಂಡರಾದ ಪರಮೇಶ್ವರ್, ಗಂಗಾಧರ, ಕುಮಾರ್, ಮಂಜುಳ, ವಸಂತ್, ಪಿ.ಕೆ.ಮಂಜುನಾಥ್, ರತ್ನಮ್ಮ ಮತ್ತಿತರರಿದ್ದರು
Protest against the state government on June 26