ಚಿಕ್ಕಮಗಳೂರು: ಶಿವಶರಣರ ಬದುಕು ಇಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾದದ್ದು ಅವರ ವಚನದೊಳಗಿನ ವಿಚಾರಗಳು ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಸಾಮಾಜಿಕ ಚಿಂತಕ ವಿಶ್ವನಾಥ್ ಸಂಕಲ್ಪ ತಿಳಿಸಿದರು.
ಜಿಲ್ಲಾಡಳಿತದ ವತಿಯಿಂದ ಮಂಗಳವಾರ ನಗರದ ಕುವೆಂಪು ಕಲಾಮಂದಿರದ ಹೇಮಂಗಣದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಅಪ್ಪಣ್ಣ ಪ್ರಿಯ ಚೆನ್ನಬಸವ ಎಂಬ ಅಂಕಿತನಾಮದಿಂದ ಪ್ರಸಿದ್ಧರಾಗಿರುವ ಶಿವಶರಣ ಹಡಪದ ಅಪ್ಪಣ್ಣನವರು ಶರಣ ಶ್ರೇಷ್ಠರಾಗಿದ್ದಾರೆ. ಸುಮಾರು ೨೫೦ಕ್ಕೂ ಹೆಚ್ಚಿನ ವಚನಗಳನ್ನು ರಚಿಸಿ ತಮ್ಮ ವಿಮರ್ಶಾತ್ಮಕ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿ, ೧೨ನೇ ಶತಮಾನದ ವಚನ ಚಳುವಳಿ ಮತ್ತು ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಒಬ್ಬರಾಗಿದ್ದಾರೆ ಎಂದರು.
ಹಡಪದ ಅಪ್ಪಣ್ಣನವರು ಬಸವಣ್ಣನವರ ಒಡನಾಡಿ ಹಾಗೂ ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ಬಸವಣ್ಣನವರಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದರು, ತಮ್ಮ ಕಾರ್ಯಕ್ಷಮತೆಯಿಂದ ಇಂದಿಗೂ ಮಾದರಿಯಾಗಿದ್ದಾರೆ ಎಂದ ಅವರು. ಶಿವಶರಣರ ಆದರ್ಶಗಳನ್ನು ಪ್ರತಿಯೊಬ್ಬರು ಅರಿತು ತಮ್ಮಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ಸಮ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ತಾಲೂಕು ಕಚೇರಿ ಗ್ರೇಡ್ ೨ ತಹಶೀಲ್ದಾರ್ ರಾಮರಾವ್ ದೇಸಾಯಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶಿವಶರಣರು ಭಕ್ತಿ ಭಂಡಾರದ ಜೊತೆಗೆ ಕಾಯಕ ನಿಷ್ಠೆಗೂ ಹೆಸರು ವಾಸಿಯಾಗಿದ್ದ ಶಿವಶರಣರು ಎಲ್ಲರನ್ನೂ ಸಮಾನವಾಗಿ ಕಾಣುವ ಸರ್ವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರಣೆ ನೀಡುವ ಶರಣರ ಸರಳತೆಯ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶರಣರಲ್ಲಿ ಎಲ್ಲ ಜಾತಿಯ ಜನರು ಇದ್ದರು, ಮೇಲ್ವರ್ಗದ ಜನರು ಹಾಗೂ ಕೆಳವರ್ಗದ ಜನರು ಎಲ್ಲರೂ ಒಟ್ಟಿಗೆ ಸೇರಿ ಸಾಮಾಜಿಕ ಸಮಾನತೆಯನ್ನು ಸಾರಿದರು. ಪ್ರಸ್ತುತ ಸಮಾಜದಲ್ಲಿ ತಲೆದೋರಿರುವ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶರಣರ ಬದುಕು ಪ್ರೇರಣಾದಯಕವಾಗಿದೆ ಶರಣ ಧರ್ಮವು ಉದಾರ, ವ್ಯೆಚಾರಿಕ ಹಾಗೂ ಸಾಮಾಜಿಕ ಕಳಕಳಿಯನ್ನು ಹೊಂದಿದ್ದು ಉತ್ತಮ ಸಮಾಜ ನಿರ್ಮಾಣದಲ್ಲಿ ಶಿವ ಶರಣರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸವಿತಾ ಸಮಾಜದ ಗೌರವಾಧ್ಯಕ್ಷ ಎನ್.ಸತೀಶ್, ತಾಲೂಕು ಸವಿತ ಸಮಾಜದ ಅಧ್ಯಕ್ಷ ಜೆ. ಸತ್ಯನಾರಾಯಣ, ಹಿರಿಯ ಕಲಾವಿದರಾದ ಮುನಿರತ್ನ, ಸವಿತಾ ಸಮಾಜದ ಮುಖಂಡರು ಉಪಸ್ಥಿತರಿದ್ದರು
Shivsharan Hadapadaappanna Jayanti programme