ಚಿಕ್ಕಮಗಳೂರು: ಮೆಸ್ಕಾಂನಿಂದ ತುರ್ತು ವಿದ್ಯುತ್ ಕಾಮಗಾರಿಗಳನ್ನು ನಿರ್ವಹಿಸಲು ನಿಗದಿಪಡಿಸಿದ್ದ ಶೇ.೪೫ರಷ್ಟಿನ ಎಸ್ಆರ್ ದರವನ್ನು ಶೇ.೧೨ ಕ್ಕೆ ಇಳಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ತುರ್ತು ಕಾಮಗಾರಿಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಹರೀಶ್.ಆರ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಜಿಲ್ಲೆಯಾದ್ಯಂತ ಗಾಳಿ-ಮಳೆ ಬರುವ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಹಾನಿಯಾಗಿ ಮುರಿದು ಬಿದ್ದಾಗ ಇದರ ದುರಸ್ಥಿಗೆ ಎಸ್ಆರ್ ದರದಂತೆ ಪ್ರತೀ ಕಂಬಕ್ಕೆ ೬೦೦೦ ರೂಗಳನ್ನು ನೀಡುತ್ತಿದ್ದು ಅದನ್ನು ಈಗ ೩೦೦೦ ರೂಗಳಿಗೆ ಇಳಿಸಿರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನಿನ್ನೆಯಿಂದ ಬ್ರೇಕ್ಡೌನ್ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದರು.
ಹಿಂದೆ ಇದೇ ಕಾಮಗಾರಿಗೆ ೬೦೦೦ ಸಾವಿರ ರೂಗಳನ್ನು ನೀಡುತ್ತಿದ್ದು, ಈಗ ವಿದ್ಯುತ್ ಕಂಬ ಮುರಿದು ಬಿದ್ದ ತುರ್ತು ಕಾಮಗಾರಿ ಕೈಗೊಳ್ಳಲು ಸರ್ಕಾರ ೩೦೦೦ ರೂಗಳನ್ನು ನಿಗದಿಪಡಿಸಿರುವುದರಿಂದ ಕಾರ್ಮಿಕರ ವೇತನವೂ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಹಿಂದಿನ ಎಸ್ಆರ್ ದರಂದತೆ ಬಿಲ್ ಪಾವತಿಸಬೇಕೆಂದು ಒತ್ತಾಯಿಸಿದರು.
ಈ ಸಂಬಂಧ ೨೫-೦೩-೨೦೨೪ ರಂದು ಎಲ್ಲಾ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಯನ್ನು ನೀಗಿಸುವಂತೆ ಸಚಿವರಿಗೆ ಮನವಿ ನೀಡಿದ್ದು, ೧೫ ದಿನಗಳ ಕಾಲಾವಕಾಶಗಳನ್ನು ನೀಡಿದ್ದು ಆದರೆ ಇದೂವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಬ್ರೇಕ್ಡೌನ್ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಮಲೆನಾಡು ಭಾಗದಲ್ಲಿ ಮಳೆಗಾಲದ ಸಂದರ್ಭದಲ್ಲಿ ವಿದ್ಯುತ್ ಕಂಬಗಳು ಮುರಿದು ಬೀಳುತ್ತಿದ್ದು ವಿದ್ಯುತ್ ಗುತ್ತಿಗೆದಾರರು ಕಾಮಗಾರಿಯನ್ನು ನಿರ್ವಹಿಸಿ ಗ್ರಾಹಕರಿಗೆ ವಿದ್ಯುತ್ ಸಂಪರ್ಕ ನೀಡಲು ನೆರವಾಗುತ್ತಿದ್ದು, ಈ ಸೌಲಭ್ಯವನ್ನು ವಾಪಸ್ ಪಡೆದಿರುವುದರಿಂದ ಗುತ್ತಿಗೆದಾರರಿಗೆ ತುಂಬಾ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಗುತ್ತಿಗೆದಾರರು ಸ್ವಂತ ನಿರ್ವಹಣೆಯಲ್ಲಿ ಐಪಿ ಸೆಟ್ ಕಾಮಗಾರಿಗಳಿಗೆ ೪ಸ್ಟಾರ್ ಪರಿವರ್ತಕಗಳನ್ನು ಅಳವಡಿಸಲು ನಿರ್ದೇಶನವಿದ್ದರೂ ಅಧಿಕಾರಿಗಳು ೫ಸ್ಟಾರ್ ಪರಿವರ್ತಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸುತ್ತಾರೆ. ಆದ್ದರಿಂದ ತಾವು ಇಲಾಖೆಗೆ ಸೂಕ್ತ ಮಾರ್ಗದರ್ಶನ ನೀಡಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಹಿಂದಿನ ಎಸ್ಆರ್ ದರದಂತೆ ಪ್ರತಿ ಕಂಬ ದುರಸ್ಥಿಗೆ ೬೦೦೦ ರೂಗಳನ್ನು ನೀಡುವುದಾಗಿ ಅದೇಶಿಸುವವರೆಗೆ ಬ್ರೇಕ್ಡೌನ್ ಕಾಮಗಾರಿಗಳನ್ನು ನಡೆಸುವುದಿಲ್ಲವೆಂದು ಸಂಘ ತೀರ್ಮಾನಿಸಿರುವುದಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಎಂ.ರಮೇಶ್, ಜಿಲ್ಲಾ ಗೌರವ ಸಂಘಟನಾ ಕಾರ್ಯದರ್ಶಿ ಕಾಂತಕುಮಾರ್ ಕೆ.ಎಸ್, ಶಶಿ, ಕಾಂತರಾಜ್, ಸಮೀರ್ ಮತ್ತಿತರರು ಉಪಸ್ಥಿತರಿದ್ದರು.
Licensed Electrical Contractors Association News Conference