ಶೃಂಗೇರಿ: ಗುಡ್ಡ ಕುಸಿತವಾಗುತ್ತಿರುವ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ತಡೆ ಗೋಡೆ ನಿರ್ಮಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಶೃಂಗೇರಿ -ಕೊಪ್ಪ ರಾಷ್ಟ್ರೀಯ ಹೆದ್ದಾರಿಯಲ್ಲಿ ೧೬೯ ರ ಕಡೆಮನೆ ಬಳಿ ಭೂಕುಸಿತವಾದ ಸ್ಥಳ ವೀಕ್ಷಣೆ ಮಾಡಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆಗೋಡೆ ಅಗತ್ಯವಾದ ಕಡೆಗೆ ಅನುದಾನಕ್ಕಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಮಾತುಕತೆ ನಡೆಸಲಾಗುತ್ತದೆ.ಶಿರೂರು ಘಟನೆ ಬಳಿಕ ರಸ್ತೆ ಅಗಲಿಕರಣ ಸಂದರ್ಭದಲ್ಲಿ ಹಲವೆಡೆ ಮತ್ತೆ ಕುಸಿತವಾಗುವ ಭೀತಿ ಎದುರಾಗಿದೆ.
ಮಲೆನಾಡಿನಲ್ಲಿ ಸತತ ಮಳೆ, ಗಾಳಿಯಿಂದ ರಸ್ತೆ, ಸೇತುವೆ, ತೋಟಗಾರಿಕಾ ಬೆಳೆ, ಮನೆಗಳಿಗೆ ಹಾನಿ ಸಂಭವಿಸಿದೆ. ಮನೆ ಕುಸಿತವಾದ ಸ್ಥಳಕ್ಕೆ ಅಧಿಕಾರಿಗಳನ್ನು ಕಳಿಸಿ, ವರದಿ ತರಿಸಿಕೊಳ್ಳಲಾಗಿದೆ. ಮನೆ ಕುಸಿತವಾದವರಿಗೆ ೧.೨೦ ಲಕ್ಷ ರೂ, ಅನಧಿಕೃತವಾಗಿ ಮನೆ ಕಟ್ಟಿ ಕುಸಿತವಾದವರಿಗೂ ಮಾನವೀಯತೆ ಆಧಾರದಲ್ಲಿ ಒಂದು ಲಕ್ಷ ರೂ. ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ- ೧೬೯ ರ ಬೋಳುಗುಡ್ಡೆ ಪ್ರದೇಶದಲ್ಲಿ ೧೨ ಮನೆ ಅಪಾಯದಲ್ಲಿದ್ದು, ಭೂಕುಸಿತವಾಗುವ ಭೀತಿ ಇದೆ. ಅಪಾಯ ಸಂಭವಿಸುವ ಮೊದಲು ಅಲ್ಲಿನ ನಿವಾಸಿಗಳ ಮನವನ್ನು ಒಲಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಬೇಕು ಎಂದು ತಹಸೀಲ್ದಾರ್ ಗೌರಮ್ಮರಿಗೆ ನಿರ್ದೆಶನ ನೀಡಿದರು. ಮೆಸ್ಕಾಂ ಇಲಾಖೆಯು ತೀವ್ರ ಮಳೆ, ಗಾಳಿ ನಡುವೆ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ. ತಾಲೂಕಿನಲ್ಲಿ ನೂರಾರು ಕಂಬ ನೆಲಕ್ಕೆ ಉರುಳಿದ್ದು, ಶೀಘ್ರವಾಗಿ ಗ್ರಾಮೀಣ ಭಾಗಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಅತಿವೃಷ್ಠಿಯಿಂದ ಮಲೆನಾಡಿಗರು ಅಡಕೆ, ಕಾಫಿ ಮತ್ತಿತರ ಬೆಳೆಗೆ ಹಾನಿಯಾಗಿದ್ದು, ಶೀಘ್ರವೇ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ, ಮುಖ್ಯಮಂತ್ರಿಗಳ ಬಳಿ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗುತ್ತದೆ ಎಂದ ಅವರು ಮೆಸ್ಕಾಂ ಇಲಾಖೆಗೆ ನೂತನ ಎ.ಇ ಅವರನ್ನು ನೇಮಕ ಮಾಡಲಾಗುವುದು.ನೆಮ್ಮಾರ್ ಹೊಳೆಹದ್ದು ಸೇತುವೆಯ ನಿರ್ಮಾಣಕ್ಕೆ ಅತಿ ಶೀರ್ಘ್ರವಾಗಿ ಚಾಲನೆ ನೀಡಲಾಗುವುದು.
ತೋಟಗಾರಿಕಾ ಬೆಳೆಗಳ ಅತಿಯಾದ ಮಳೆಯಿಂದ ರೋಗ ಬೀತಿಯನ್ನು ಎದುರಿಸುತ್ತಿದೆ.ಹಲವು ಕಡೆ ಗ್ರಾಮೀಣರಸ್ತೆಗಳು ಸಂಪೂರ್ಣ ಹಾನಿಗೊಂಡಿದೆ.ಸಂಬಂಧಪಟ್ಟ ಇಲಾಖೆಗಳಿಂದ ಎಲ್ಲಾಮಾಹಿತಿ ಪಡೆದು ಸರಕಾರಕ್ಕೆ ಪರಿಹಾರ ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವು ಎಂದರು.
ಅತಿವೃಷ್ಠಿಯಿಂದ ಹಾನಿಗೊಳಗಾದ ತ್ಯಾವಣ, ನೆಮ್ಮಾರ್ ಹೊಳೆಹದ್ದು ತೂಗು ಸೇತುವೆಯನ್ನು ವೀಕ್ಷಿಸಿದರು. ಸಚಿವರೊಂದಿಗೆ ಜಿಲ್ಲಾಧಿಕಾರಿ ಮೀನಾನಾಗರಾಜ್, ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮಟೆ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೀರ್ತನ, ರಾಷ್ಟ್ರೀಯ ಹೆದ್ದಾರಿ ಎಇಇ ಮಂಜುನಾಥ್, ತಹಸೀಲ್ದಾರ್ ಗೌರಮ್ಮ, ತಾ.ಪಂ ಇಒ ಸುದೀಪ್, ಎಡಿಎಚ್ ಶ್ರೀಕೃಷ್ಣ,ಮೆಸ್ಕಾಂ ಎಇಇ ದೀಪಕ್ ಮೊದಲಾದವರು ಇದ್ದರು.
೨೮ಎಸ್.ಆರ್.ಐ -ಶೃಂಗೇರಿ ತಾಲೂಕಿನ ಕಡೆಮನೆ ಬಳಿ ರಾಷ್ಟ್ರೀಯ ಹೆದ್ದಾರಿ ೧೬೯ ರ ಭೂಕುಸಿತವಾದ ಸ್ಥಳವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ವೀಕ್ಷಿಸಿದರು. ರಾಜೇಗೌಡ,ಕಾಂಗ್ರೆಸ್ ಮುಖಂಡರಾದ ನಟರಾಜ್,ದಿನೇಶ್ ಹೆಗಡೆ,ಪುಟ್ಟಪ್ಪ ಹೆಗಡೆ,ಕೆ.ಆರ್.ವೆಂಕಟೇಶ್,ದಿನೇಶ್ ಸೆಟ್ಟಿ ಹಾಜರಿದ್ದರು.
National Highways Authority instructs authorities to construct barrier wall