ಚಿಕ್ಕಮಗಳೂರು: ಜಿಲ್ಲೆಯ ಹಿರಿಯ ಪತ್ರಕರ್ತ ಜಿ.ವಿ.ಚೂಡನಾಥ ಅಯ್ಯರ್(೭೬) ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೆ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಪತ್ನಿ ಯಶೋಧ ಸೇರಿದಂತೆ ಇಬ್ಬರು ಪುತ್ರರು ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉಪ್ಪಳ್ಳಿಯ ಮುಕ್ತಿಧಾಮದಲ್ಲಿ ಇಂದು ಮಧ್ಯಾಹ್ನ ಅಂತ್ಯಕ್ರಿಯೆ ನಡೆಯಿತು.
ಹೊಸದಿಗಂತ ಮತ್ತು ಗಿರಿವಾಹಿನಿಯ ಜಿಲ್ಲಾಮಟ್ಟದ ಪತ್ರಿಕೆ ಸಂಪಾದಕರು ಮತ್ತು ಪ್ರಕಾಶಕರೂ ಆಗಿದ್ದರು.ಸಂಸ್ಥೆಯೊಂದು ಹೊಸದಿಗಂತ ಪತ್ರಿಕೆಯನ್ನು ರಾಜ್ಯಮಟ್ಟದ ಪತ್ರಿಕೆಯನ್ನಾಗಿಸಿದಾಗ ಗಿರಿವಾಹಿನಿ ಪತ್ರಿಕೆಯನ್ನು ಹೊರತಂದಿದ್ದರು.ಪ್ರಖರಹಿಂದುತ್ವವಾದಿಯಾಗಿದ್ದ ಇವರು ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದ ದತ್ತಪೀಠದ ಹೋರಾಟಗಾರರಿಗೆ ಮಾರ್ಗದರ್ಶನವನ್ನು ನೀಡುತ್ತಿದ್ದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾಜಿ ಸಚಿವರಾದ ಸಗೀರ್ಅಹ್ಮದ್, ಬಿ.ಬಿ.ನಿಂಗಯ್ಯ, ಮೃತರ ಮನೆಗೆ ಭೇಟಿನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ವಿವಿಧ ಪಕ್ಷಗಳು ಮುಖಂಡರು ಜನಪ್ರತಿನಿಧಿಗಳು ನಗರದ ವಾಣಿಜ್ಯೋದಮಿಗಳು ಮೃತರ ಅಂತಿಮ ದರ್ಶನ ಪಡೆದರು. ಪ್ರೆಸ್ಕ್ಲಬ್ನಲ್ಲಿ ಚೂಡನಾಥಅಯ್ಯರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರಾದ ದಿನೇಶ್ಪಟವರ್ಧನ್, ಉಮೇಶ್ಕುಮಾರ್, ಸುರೇಶ್ ಮಾತನಾಡಿದರು.
ಅಂತ್ಯಕ್ರಿಯೆಗೂ ಮುನ್ನ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಡಾ.ಜೆ.ಪಿ.ಕೃಷ್ಣೇಗೌಡ, ಸತ್ಯನಾರಾಯಣಸ್ವಾಮಿ ಮಾತನಾಡಿದರು. ಬ್ರಾಹ್ಮಣ ಮಹಾಸಭಾದಿಂದಲೂ ಸಂತಾಪ ಸೂಚಿಸಲಾಯಿತು.
ಹಿರಿಯ ಪತ್ರಕರ್ತ ನಿಧನಕ್ಕೆ ಪ್ರೆಸ್ಕ್ಲಬ್ ಸಂತಾಪ: ಹಿರಿಯ ಪತ್ರಕರ್ತ ಚೂಡನಾಥ್ ಅಯ್ಯರ್ ಅನಾರೋಗ್ಯದಿಂದ ನಿಧನರಾದ ಹಿನ್ನೆಲೆಯಲ್ಲಿ ಸೋಮವಾರ ಪ್ರೆಸ್ಕ್ಲಬ್ ವತಿಯಿಂದ ನಗರದ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಪತ್ರಕರ್ತ ಸುರೇಶ್, ಹಿರಿಯ ಪತ್ರಕರ್ತ ಚೂಡಾನಾಥ್ ಅಯ್ಯರ್ ಓರ್ವ ನಿಷ್ಠುರ ಪತ್ರಕರ್ತರಾಗಿದ್ದು, ತಮಗೆ ಅನಿಸಿದ್ದನ್ನು ನೇರವಾಗಿ ಹೇಳುತ್ತಿದ್ದರು. ಎರಡು ಪತ್ರಿಕೆಗಳನ್ನು ಹುಟ್ಟು ಹಾಕಿದ್ದ ಅವರು, ಅಧಿಕಾರಿಗಳೇ ಇರಲೀ, ರಾಜಕಾರಣಿಗಳೇ ಇರಲಿ ಅತ್ಯಂತ ನೇರವಾದ ಶಬ್ಧಗಳಿಂದ ಪ್ರಶ್ನೆ ಮಾಡುವ ಛಾತಿ ಬೆಳೆಸಿಕೊಂಡಿದ್ದರು ಎಂದರು.
ಅವರ ನಿಷ್ಠರ ಸ್ವಭಾವ ಬರವಣಿಗೆಯಲ್ಲೂ ಎದ್ದು ಕಾಣುತ್ತಿತ್ತು. ಅವರ ಈ ಸ್ವಭಾವದಿಂದಾಗಿ ಅವರೊಬ್ಬ ನಿಷ್ಠುರವಾದಿ ಪತ್ರಕರ್ತ ಎಂದೆನಿಸಿದರೂ ಆಂತರಿಕವಾಗಿ ಅವರು ಅತ್ಯಂತ ಮೃಧುವಾಗಿದ್ದರು. ಅವರ ಗರಡಿಯಲ್ಲಿ ಬೆಳೆದ ಅನೇಕ ಪತ್ರಕರ್ತರು ಸದ್ಯ ಉತ್ತಮ ಪತ್ರಕರ್ತರಾಗಿ ಹೊರಹೊಮ್ಮಿದ್ದಾರೆ ಎಂದರು.
ಚೂಡಾನಾಥ್ ಅಯ್ಯರ್ ತಾವು ನಂಬಿದ್ದ ಸಿದ್ಧಾಂತಕ್ಕೆ ಬದ್ಧರಾಗಿದ್ದರು. ಅದನ್ನು ಕಡೆಯವರೆಗೂ ಪಾಲಿಸಿಕೊಂಡು ಬಂದಿದ್ದರು. ಅವರ ಜೀವನ ಇಂದಿನ ಪತ್ರಕರ್ತರಿಗೆ ಮಾದರಿ. ಪತ್ರಿಕೆ ನಿಂತ ಬಳಿಕವೂ ಪತ್ರಕರ್ತರೊಂದಿಗೆ ಒಡನಾಟದಲ್ಲಿದ್ದ ಅವರು ಪತ್ರಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ಧರು. ಅವರ ಅಗಲಿಕೆಯಿಂದ ಜಿಲ್ಲೆಯ ಪತ್ರಿಕಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ಸಭೆಯಲ್ಲಿ ಅಗಲಿದ ಹಿರಿಯ ಪತ್ರಕರ್ತರಿಗೆ ೧ ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ತಮ್ಮಯ್ಯ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ಡಾ.ವಿಕ್ರಮ್ ಅಮಟೆ, ಜಿಪಂ ಸಿಇಒ ಎಚ್.ಎಸ್.ಕೀರ್ತನಾ, ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ರಾಜೇಶ್, ಉಪಾಧ್ಯಕ್ಷ ಚಂದ್ರೇಗೌಡ, ಕಾರ್ಯದರ್ಶಿ ತಾರಾನಾಥ್, ಖಜಾಂಚಿ ಗೋಪಿ ಸೇರಿದಂತೆ ಪ್ರೆಸ್ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.
Senior Journalist GV Chudanath Iyer passed away