ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಹಿರೇಮಗಳೂರು ಗ್ರಾಮವನ್ನು ಶಾಸಕರ ಸೂಚನೆ ಮೇರೆಗೆ ವಿಶೇಷ ಅನುದಾನ ಪಡೆದು ಮಾದರಿ ಗ್ರಾಮವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಬಿ.ಸಿ ಬಸವರಾಜ್ ತಿಳಿಸಿದರು.
ಅವರು ಇಂದು ವಾರ್ಡ್ ಸಂಖ್ಯೆ ೪ ರ ಹಿರೇಮಗಳೂರು ಗ್ರಾಮದಲ್ಲಿ ಮಳೆಯಿಂದ ಹಾನಿಯಾಗಿರುವ ಮನೆಗಳ ಸಮೀಕ್ಷೆ ನಡೆಸಿ ಅಧಿಕಾರಿ ಸಿಬಂದಿಗಳೊಂದಿಗೆ ಪರಿಶೀಲಿಸಿ ಮಾತನಾಡಿದರು.
ಶಾಸಕ ಹೆಚ್.ಡಿ ತಮ್ಮಯ್ಯ ಅವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಹಿರೇಮಗಳೂರು ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಪೂರಕವಾಗಿ ಅಭಿವೃದ್ಧಿಪಡಿಸಲು ವಿಶೇಷ ಅನುದಾನ ತರಲು ಹೊಸದಾಗಿ ಸಮಗ್ರ ಪ್ರಸ್ತಾವನೆಯೊಂದನ್ನು ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದೆಂದು ಹೇಳಿದರು.
ಅತಿ ಹೆಚ್ಚು ಮಳೆಯಾಗುತ್ತಿರುವುದರಿಂದ ಹಿರೇಮಗಳೂರು ಗ್ರಾಮದಲ್ಲಿ ಮನೆಯೊಂದು ಕುಸಿದಿದ್ದು ಹಾಗೂ ಕೆಲವು ಮನೆಗಳಿಗೆ ಕೊಳಚೆ ನೀರು ಬರುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ಜೆಸಿಬಿಯನ್ನು ಬಳಸಿ ಚರಂಡಿಯಲ್ಲಿ ನೀರು ಸರಾಗವಾಗಿ ಹೋಗುವಂತೆ ಮಾಡಲು ಸಿಬ್ಬಂದಿಗಳಿಗೆ ಸೂಚಿಸಿದರು.
ಇದೇ ಗ್ರಾಮದಲ್ಲಿ ಕೆಲವು ಮನೆಗಳಿಗೆ ಒಳಚರಂಡಿ ಸಂಪರ್ಕ ಕಲ್ಪಿಸಿಲ್ಲ ಎಂಬ ಮನವಿ ಮೇರೆಗೆ ಅಧಿಕಾರಿ ಸಿಬ್ಬಂದಿಗಳ ಸಹಿತ ಪರಿಶೀಲನೆ ನಡೆಸಿದ್ದು, ಕೂಡಲೇ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ನಗರದಲ್ಲಿ ಹೊಸದಾಗಿ ಒಳಚರಂಡಿ ಮತ್ತು ವಾಟರ್ ಲೈನ್ ಕಾಮಗಾರಿಯನ್ನು ಆರಂಭಿಸಿರುವುದರಿಂದ ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಇದನ್ನು ದುರಸ್ಥಿಪಡಿಸಲು ಮಳೆ ಅಡ್ಡಿಯಾಗುತ್ತಿದೆ, ಇಂತಹ ತುರ್ತು ಕಾಮಗಾರಿಗಳಿಗೆ ಅನುದಾನವನ್ನು ಮೀಸಲಿಟ್ಟು ಮಳೆ ಕಡಿಮೆಯಾದ ನಂತರ ಕಾಮಗಾರಿ ಆರಂಭಿಸಲಾಗುವುದೆಂದು ತಿಳಿಸಿದರು.
ನಗರದಲ್ಲಿ ಅಗತ್ಯ ಇರುವ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿಗಳು ಟೆಂಡರ್ ಕರೆಯುವಂತೆ ಆದೇಶ ನೀಡಿರುವುದರಿಂದ ಟೆಂಡರ್ ಪ್ರಕ್ರಿಯೆ ಸಧ್ಯದಲ್ಲೇ ಮುಕ್ತಾಯಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕಾಮಗಾರಿಗಳನ್ನು ತುರ್ತಾಗಿ ಆರಂಭಿಸಿ ರಸ್ತೆಗಳಿಗೆ ವೆಟ್ಮಿಕ್ಸ್ ಹಾಕಿ ದುರಸ್ಥಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು ೮ ಮನೆಗಳು ಹಾನಿಯಾಗಿದ್ದು, ಪ್ರತಿ ಮನೆಗೆ ೧.೨೦ ಲಕ್ಷ ರೂ ತಾತ್ಕಾಲಿಕ ಪರಿಹಾರವನ್ನು ಈಗಾಗಲೇ ತಹಶೀಲ್ದಾರ್ ಬಿಡುಗಡೆ ಮಾಡಿದ್ದು, ಮನೆ ಹಾನಿಗೆ ಸಂಬಂಧಿಸಿದಂತೆ ಪೂರ್ಣ ವರದಿ ಬಂದ ನಂತರ ಸರ್ಕಾರ ನಿಗದಿಗೊಳಿಸಿರುವ ದರದಂತೆ ಪರಿಹಾರವನ್ನು ಹಾನಿಯಾದ ಕುಟುಂಬಕ್ಕೆ ಇನ್ನೆರಡು ದಿನಗಳಲ್ಲಿ ಶಾಸಕರು ವಿತರಣೆ ಮಾಡಲಿದ್ದಾರೆಂದರು.
ಈ ಸಂದರ್ಭದಲ್ಲಿ ನಗರ ನೀರು ಮತ್ತು ಒಳಚರಂಡಿ ಮಂಡಳಿಯ ಎಇಇ, ನಗರಸಭೆ ಆರೋಗ್ಯ ನಿರೀಕ್ಷಕರು, ನಗರಸಭೆ ಸದಸ್ಯರು, ಆಶ್ರಯ ಸಮಿತಿ ಸದಸ್ಯರು ಹಾಜರಿದ್ದರು.
Survey of rain-damaged houses in Hiremagaluru village of Ward No. 4