ಚಿಕ್ಕಮಗಳೂರು: ಮುಡಾ ನಿವೇಶನ ಹಗರಣ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯುವಂತೆ ಒತ್ತಾಯಿಸಿ ವಿಧಾನ ಪರಿಷತ್ ಶಾಸಕ ಡಾ.ಸಿ.ಟಿ.ರವಿ ಅವರು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ಇರುವ ಆಡಳಿತ ಪಕ್ಷ, ಪ್ರತಿ ಪಕ್ಷಗಳ ಆರೋಪ, ಪ್ರಶ್ನೆಗಳಿಗೆ ಉತ್ತರಿಸುವ ಅತ್ಯುನ್ನತ ವೇದಿಕೆ ವಿಧಾನ ಮಂಡಲವಾಗಿದ್ದು, ಅಲ್ಲಿ ಪ್ರಶ್ನಿಸಲು, ಆರೋಪಿಸಲು ಅವಕಾಶ ನೀಡದೆ ಸದನದ ಹೊರಗೆ ಮುಡಾ ನಿವೇಶನ ಹಗರಣಕ್ಕೆ ಸಂಬಂಧಿಸಿದಂತೆ ಮತ್ತು ತಮ್ಮ ಸಾರ್ವಜನಿಕ ಬದುಕಿಗೆ ಸಂಬಂಧಿಸಿದಂತೆ ಅರ್ಧ ಸತ್ಯವನ್ನು ಮಾತ್ರ ಹೇಳಿರುವ ತಾವು ಪೂರ್ಣ ಸತ್ಯವನ್ನು ತೆರೆದಿಡುವಂತೆ ಒತ್ತಾಯಿಸಿ ಬಹಿರಂಗವಾಗಿ ಪತ್ರ ಬರೆಯುತ್ತಿರುವುದಾಗಿ ಅವರು ಸೋಮವಾರ ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
೧೯೩೫ ರಲ್ಲಿ ಕೆಸರೆಗದ್ದೆ ಗ್ರಾಮದ ಸ.ನಂ.೪೬೨, ೪೬೪ರಲ್ಲಿದ್ದ ಜಮೀನನ್ನು ಹರಾಜು ಮೂಲಕ ಕೇವಲ ಒಂದು ರೂಪಾಯಿಯನ್ನು ಕಟ್ಟಿಸಿಕೊಂಡು ಕ್ರಮವಾಗಿ ೪ ಎಕರೆ ೩೭ ಗುಂಟೆ ಮತ್ತು ೩ ಎಕರೆ ೧೬ ಗುಂಟೆ ಜಮೀನನ್ನು ಪರಿಶಿಷ್ಟ-ಜಾತಿಯ ಜವರ ಉರುಫ್ ನಿಂಗ ಎಂಬುವವರಿಗೆ ನೀಡಲಾಗಿತ್ತು. ಪರಿಶಿಷ್ಟ-೧ ಅಂದರೆ ವಿಶೇಷವಾಗಿ ಪರಿಶಿಷ್ಟ ಜನಾಂಗಕ್ಕೆ ಕಡಿಮೆ ಕಿಮ್ಮತ್ತಿನಲ್ಲಿ ನೀಡಿರುವುದು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆ ಎಂದು ಪತ್ರದಲ್ಲಿ ಮುಖ್ಯ ಮಂತ್ರಿಗಳನ್ನು ಪ್ರಶ್ನಿಸಿದ್ದಾರೆ.
ಆನಂತರ ೧೯೬೮ ರಲ್ಲಿ ಜವರ ಉರುಪ್ ನಿಂಗ ಅವರ ಮೂರು ಮಕ್ಕಳಲ್ಲಿ ಇಬ್ಬರು ಮಕ್ಕಳಾದ ಮಲ್ಲಯ್ಯ ಮತ್ತು ದೇವರಾಜು ಅವರಿಗೆ ೩೦೦ ರೂಪಾಯಿಗಳಿಗೆ ಮತ್ತೊಬ್ಬ ಸಹೋದರ ಮೈಲಾರಯ್ಯ ಅವರಿಗೆ ಜಮೀನಿನ ಹಕ್ಕು ಖುಲಾಸೆ ಪತ್ರ ನೋಂದಣಿ ಇಲಾಖೆ ಮೂಲಕವೇ ನೋಂದಣಿ ಮಾಡಿಕೊಟ್ಟಿರುವುದು ಸತ್ಯವಲ್ಲವೇ ಎಂದು ಪ್ರಶ್ನಿಸಿರುವ ಅವರು, ಜಮೀನಿನ ವಾರಸುದಾರ ಮೈಲಾರಯ್ಯ ಮತ್ತು ಅವರ ಕುಟುಂಬಕ್ಕೆ ಈ ಜಮೀನು ಸೇರಿದ್ದಾಗಿರುತ್ತದೆ ಎಂದು ಹೇಳಿದ್ದಾರೆ.
ಮುಡಾ ೧೯೯೨ ರಲ್ಲಿ ೪/೧ ಮತ್ತು ೧೯೯೭ ರಲ್ಲಿ ೬/೧ ನೋಟಿಫಿಕೇಷನ್ ಆಗಿದೆ. ಆದರೆ, ತಾವು ವಿಲೇಜ ಮ್ಯಾಪ್ ತೋರಿಸಿ ಜಮೀನು ಗ್ರಾಮದ ಅಂಚಿನಲ್ಲಿ ಬರುತ್ತದೆ ಎಂದು ಅರ್ಧ ಸತ್ಯವನ್ನು ಹೇಳಿದ್ದೀರಿ. ಆದರೆ, ಬಡಾವಣೆಯ ಯೋಜನೆಯಲ್ಲಿ ಮಧ್ಯದಲ್ಲೇ ಈ ಜಮೀನು ಬಂದಿದ್ದರೂ ತಪ್ಪು ಮಾಹಿತಿ ನೀಡಿ ಡಿ.ನೋಟಿಫಿಕೇಷನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆರ್ಟಿಸಿ ಸ್ವಾಧೀನದ ಕಾಲಂನಲ್ಲಿ ಸ.ನಂ.೪೬೪ ಮುಡಾ ಎಂದಿರುವುದು ಸತ್ಯವಲ್ಲವೇ? ೧೯೯೯ ರಿಂದ ೨೦೦೩ ರವರೆಗೂ ಮುಡಾದವರು ಇಂಡೀಕರಣ ಮಾಡಿಸಿದ್ದು, ಅದರಲ್ಲಿ ಭೂ ಸ್ವಾಧೀನದಾರರು ಮುಡಾ ಎಂದೇ ಇರುತ್ತದೆ. ೨೦೦೩ ರಲ್ಲಿ ೩೫ ವರ್ಷಗಳ ಹಿಂದೆ ಮರಣ ಹೊಂದಿರುವ ಜವರ ಉರುಫ್ ನಿಂಗ ಅವರ ಹೆಸರಿಗೆ ಮರುಸ್ಥಾಪನೆ ಮಾಡಿಸಿ ನಂತರ ದೇವರಾಜುರವರ ಹೆಸರಿಗೆ ವರ್ಗಾವಣೆ ಮಾಡಿಸಿರುತ್ತಾರೆ. ೨೦೦೪ ಮತ್ತು ೨೦೦೫ ನೆಯ ಸಾಲಿನ ಆರ್ ಟಿಸಿಯಲ್ಲಿ ಮಾತ್ರ ಕ್ರಮವಾಗಿ ದೇವರಾಜ ವತ್ತು ಮಲ್ಲಿಕಾರ್ಜುನಸ್ವಾಮಿ ಅವರ ಹೆಸರಿಗೆ ಇದೆ. ಈ ಸಂದರ್ಭದಲ್ಲಿಯೂ ತಾವು ಎರಡನೆಯ ಬಾರಿ ಉಪ ಮುಖ್ಯ ಮಂತ್ರಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು ನಿಜವಲ್ಲವೇ ಎಂದು ಪ್ರಶ್ನಿಸಿದ್ದಾರೆ ?
೨೦೦೬ ರಿಂದ ನಿರಂತರವಾಗಿ ಇಂದಿನವರೆಗೂ ಆರ್ಟಿಸಿಯಲ್ಲಿ ಭೂಸ್ವಾಧೀನದಾರರ ಹೆಸರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಎಂದು ಇರುವುದು ಸತ್ಯವಲ್ಲವೇ ಎಂದು ಪ್ರಶ್ನಿಸಿರುವ ಅವರು, ದೇವನೂರು ಬಡಾವಣೆ ಅಭಿವೃದ್ಧಿಪಡಿಸಲು ಏಪ್ರಿಲ್ ೨೭, ೨೦೦೧ ರಲ್ಲಿ ಎಲ್ ಅಂಡ್ ಟಿ ಕಂಪನಿಗೆ ಟೆಂಡರ್ ಮೊತ್ತ ೧೧,೬೮,೮೬,೬೨೫ ರೂ.ಗಳಿಗೆ ಗುತ್ತಿಗೆ ಒಪ್ಪಂದ ಆಗಿದ್ದು, ಮೇ ೧೮, ೨೦೦೧ ರಲ್ಲಿ ಕಾಮಗಾರಿ ಪ್ರಾರಂಭವಾಗಿದೆ. ಮೇ ೧೭ ೨೦೦೩ ರಲ್ಲಿ ಕಾಮಗಾರಿ ಮುಕ್ತಾಯವಾಗಿರುತ್ತದೆ. ನಿಮ್ಮ ಭಾವಮೈದುನ ಜಮೀನು ಖರೀದಿಸುವ ಮೊದಲೇ
ಸ.ನಂ ೪೬೪ರಲ್ಲಿ ೩ ಎಕರೆ ೧೬ ಗುಂಟೆ ಜಮೀನಿನಲ್ಲಿ ರಸ್ತೆ ಉದ್ಯಾನವನ ಮತ್ತು ನಿವೇಶನಗಳನ್ನು ಅಭಿವೃದ್ಧಿಪಡಿಸಿರುವುದು ಸತ್ಯವಲ್ಲವೆ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಭಾವಮೈದುನ ಜಮೀನು ಖರೀದಿಸುವುದಕ್ಕೆ ಮೊದಲೇ ಅಭಿವೃದ್ಧಿಗೊಂಡು ನಿವೇಶನ ಹಂಚಿಕೆಯದಂತಹ ಸ.ನಂ.೪೬೪ರ ೩ ಎಕರೆ ೧೬ ಗುಂಟೆ ೨೦೦೪ ರಲ್ಲಿ ಕೃಷಿ ಜಮೀನಾಗಿ ಕಾಣಿಸಿದ್ದು ಹೇಗೆ ? ಮತ್ತು ಸ್ಥಳ ಪರಿಶೀಲಿಸದೆಯೇ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಅನ್ಯಕ್ರಾಂತ ಮಾಡಲು ಉಪ ಮುಖ್ಯ ಮಂತ್ರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ತಾವು ಪ್ರಭಾವ ಬೀರಿದ ವ್ಯಕ್ತಿ ನೀವಲ್ಲವೇ? ನಿಮ್ಮ ಭಾವಮೈದುನ ಈ ಜಮೀನು ಖರೀದಿಸುವ ಸಂದರ್ಭದಲ್ಲಿ ನೀಡಿರುವ ವಿಳಾಸ ಮನೆ ನಂ.೧೨೪೫ ಟಿಕೆ ಲೇಔಟ್, ೪ನೆ ಹಂತ, ೩ನೆ ಕ್ರಾಸ್, ಕುವೆಂಪುನಗರ, ಮೈಸೂರು ನಗರ, ಈ ವಿಳಾಸ ತಾವು ವಾಸ ಮಾಡುತ್ತಿದ್ದ ಮನೆಯ ವಿಳಾಸವಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಜೆ.ದೇವರಾಜು ಸರ್ಕಾರಿ ಉದ್ಯೋಗಿಯಾಗಿದ್ದರೂ ಸಹ ತಪ್ಪು ಮಾಹಿತಿ ನೀಡಿ ‘ನಾನು ರೈತನಾಗಿದ್ದು, ಈ ಜಮೀನಿನಲ್ಲಿ ತೆಂಗಿನ ಸಸಿಗಳು ಸೇರಿದಂತೆ ಮಾವು ಇತ್ಯಾದಿ ಬೆಳೆಗಳು ಇದ್ದು, ನನಗೆ ಇದನ್ನು ಬಿಟ್ಟರೆ ಇನ್ಯಾವುದೇ ಅದಾಯವಿಲ’ ಎಂದು ಸುಳ್ಳು ಮಾಹಿತಿ ನೀಡಿ ತಮ್ಮ ಪ್ರಭಾವದಿಂದ ಡಿ ನೋಟಿಫಿಕೇಷನ್ ಮಾಡಿಸಲಾಗಿದೆ ಎಂಬ ಆರೋಪವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
೨೦೧೦ ರಲ್ಲಿ ತಮ್ಮ ಧರ್ಮ ಪತ್ನಿ ಪಾರ್ವತಮ್ಮನ ಹೆಸರಿಗೆ ತಮ್ಮ ಭಾವಮೈದುನ ದಾನಪತ್ರ ಮಾಡುವಾಗಲೇ ಮುಡಾ ಸ.ನಂ.೪೬೪ರ ೩ ಎಕರೆ ೧೬ ಗುಂಟೆ ಜಮೀನನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ ಸತ್ಯದ ಅರಿವು ತಮಗಿರಲಿಲ್ಲವೇ ಎಂದು ಪ್ರಶ್ನಿಸಿರುವ ರವಿಯವರು, ೨೦೧೩ರ ಚುನಾವಣಾ ಪ್ರಮಾಣ ಪತ್ರದಲ್ಲಿ ಈ ಸತ್ಯವನ್ನು ಮರೆಮಾಚಿದ್ದೀರಿ. ಕಣ್ತಪ್ಪಿನಿಂದ ಆಗಿದೆ ಎಂದು ಈಗ ಹೇಳಿದ್ದೀರಿ. ಆರ್ಪಿ ಕಾಯ್ದೆ ಸೆಕ್ಷೆನ್ ೧೨೫ ಎ ಪ್ರಕಾರ ಇದು ಶಿಕ್ಷಾರ್ಹ ಅಪರಾಧವಲ್ಲವೇ ? ನಿಮ್ಮ ಧರ್ಮ ಪತ್ನಿಯವರು ನನ್ನ ಜಮೀನು ಅತಿಕ್ರಮವಾಗಿದೆ ಎಂದು ದೂರು ನೀಡಿದಾಗ ಮುಡಾದವರು ಪರ್ಯಾಯವಾಗಿ ಅಂದಿನ ಮಾರುಕಟ್ಟೆ ದರ ೧೫ ಲಕ್ಷ ರೂ.ಗಳನ್ನು ಕೊಡುವುದಾಗಿ ಪತ್ರ ಬರೆದಿರುವುದು ನಿಜವಲ್ಲವೇ ಹೇಳಿ ಎಂದು ಪ್ರಶ್ನಿಸಿದ್ದಾರೆ.
೨೦೧೦ ರಲ್ಲಿ ನಿಮ್ಮ ಧರ್ಮ ಪತ್ನಿಯವರಿಗೆ ದಾನಪತ್ರ ಆಗುವಾಗ ಅನ್ಯಕ್ರಾಂತವಾಗಿರುವ ಭೂಮಿಯನ್ನು ತಾವು ತಮ್ಮ ೨೦೧೮ರ ಚುನಾವಣಾ ಪ್ರಮಾಣ ಪತ್ರದಲ್ಲಿ ಅನ್ಯಕ್ರಾಂತವಾದ ಜಾಗವನ್ನು ಕೃಷಿ ಭೂಮಿ ಮತ್ತು ಇದರ ಮೌಲ್ಯ ೨೫ ಲಕ್ಷ ರೂ. ಎಂದು ನಮೂದಿಸಲಾಗಿದೆ. ೨೦೨೩ ರ ಚುನಾವಣಾ ಪ್ರಮಾಣ ಪತ್ರದಲ್ಲಿ ಇದೇ ಜಾಗದ ಮೌಲ್ಯವನ್ನು ೮ ಕೋಟಿ ಎಂದು ನಮೂದಿಸಿದ್ದೀರಿ. ಈಗ ಮುಖ್ಯ ಮಂತ್ರಿಗಳಾಗಿರುವ ನೀವು ನಿವೇಶನವನ್ನು ವಾಪಸ್ಸು ನೀಡಲು ಕೇಳುತ್ತಿರುವ ಮೌಲ್ಯ ೬೫ ಕೋಟಿ ರೂ.ಗಳು. ಇದು ಹೇಗೆ ಸಾಧ್ಯ ಎಂದು ಸಿಎಂ ಅವರನ್ನು ಕೇಳಿದ್ದಾರೆ.
‘ಈಗ ಬಿಜೆಪಿಯವರು ಅವರ ಕುಟುಂಬ ಒಡೆದರು’ ಎಂದು ಹೇಳಿದ್ದೀರಿ. ಮೈಲಾರಯ್ಯ ಮತ್ತು ಅವರ ಮಕ್ಕಳಿಗೆ ಸೇರಬೇಕಾದ ಆಸ್ತಿಯನ್ನು ಜೆ.ದೇವರಾಜು ಹೆಸರಿಗೆ ಖಾತೆ ಮಾಡಿಸಿ ಅಲ್ಲಿಂದ ನಿಮ್ಮ ಭಾವಮೈದುನ ನಂತರ ನಿಮ್ಮ ಧರ್ಮಪತ್ನಿ ಹೆಸರಿಗೆ ವರ್ಗಾಹಿಸಿಕೊಂಡಿರುವುದು ಮೈಲಾರಯ್ಯ ಅವರ ಕುಟುಂಬದವರಿಗೆ ಮಾಡಿದ ಮೋಸವಲ್ಲವೇ ಮುಖ್ಯ ಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ.
‘ನನ್ನ ೪೦ ವರ್ಷಗಳ ಸಾರ್ವಜನಿಕ ಜೀವನದಲ್ಲಿ ಕಪ್ಪು ಚುಕ್ಕಿ ಇಲ್ಲ’ ಎಂದು ಹೇಳಿದ್ದೀರಿ. ನಿಮ್ಮ ವಿರುದ್ಧ ಸುಮಾರು ೭೦ಕ್ಕೂ ಹೆಚ್ಚು ದೂರುಗಳು ಲೋಕಾಯುಕ್ತದಲ್ಲಿ ದಾಖಲಾಗಿರುವುದು ನಮಗೆ ತಿಳಿದುಬಂದಿದೆ. ಈ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಗೆ ಬರುತ್ತದೆ ಎಂದು ಸಲಹೆ ಮಾಡಿರುವ ಅವರು, ಹಿಂದಿನ ತಮ್ಮ ಸರ್ಕಾರದ ಆರಂಭದ ಅವಧಿಯಲ್ಲಿ ಇಬ್ಬರು ಇಂಜಿನಿಯರ್ ಗಳ ಮನೆಯಲ್ಲಿ ನೂರು ಕೋಟಿ ರೂ.ಗಳಿಗೂ ಹೆಚ್ಚಿನ ಹಣ ಸಿಕ್ಕಿದ್ದು, ಇಂದಿನ ನಿಮ್ಮ ಸರ್ಕಾರದ ಆರಂಭದಲ್ಲಿಯೇ ಇಬ್ಬರು ಪ್ರಭಾವಿಗಳ ಮನೆಗಳಲ್ಲಿ ಕೋಟಿಗಟ್ಟಲೆ ಹಣ ಸಿಕ್ಕಿದೆ. ಎಸ್ಸಿಪಿ ಟೆಂಡರ್ ಪ್ಯಾಕೇಜ್ ಮಾಡಿ ನಾಲ್ಕು ಸಾವಿರ ಕೋಟಿ ರೂ.ಗಳನ್ನು ನಿಗಧಿಪಡಿಸಿ ಬೇಕಾದವರಿಗೆ ನೀಡಿರುವುದು, ಬಿಬಿಎಂಪಿಯಲ್ಲಿ ಎರಡು ಸಾವಿರ ಕೋಟಿ ರೂ.ಗಳ ಟೆಂಡರ್ ಪ್ಯಾಕೇಜ್ ಮಾಡಿ ಪರ್ಸೆಂಟೇಜ್ ನಿಗಧಿ ಮಾಡಿರುವುದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕರ್ನಾಟಕ ರಾಜ್ಯ ಹ್ಯಾಬಿಟೇಟ್ ಕೇಂದ್ರ ಬೆಂಗಳೂರು ಎನ್ನುವ ಸಂಘಕ್ಕೆ ಟೆಂಡರ್ ನೀಡಿ ಪರ್ಸೆಂಟೇಜ್ ನಿಗಧಿ ಮಾಡಿರುವುದು ತಮ್ಮ ಪ್ರಾಮಾಣಿಕ ಆಡಳಿತ ಮಾದರಿಗಳೇ ಎಂದು ಪತ್ರದಲ್ಲಿ ವ್ಯಂಗ್ಯವಾಡಿದ್ದಾರೆ.
ಪ್ರತಿಯೊಂದು ಆಯಕಟ್ಟಿನ ಹುದ್ದೆಗೂ ದರ ನಿಗಧಿ ಮಾಡಿರುವ ಬಗ್ಗೆ ವಿಧಾನಸೌಧದ ಗೋಡೆಗಳೇ ಮಾತನಾಡುತ್ತಿವೆ. ಅರ್ಕಾವತಿ ಬಡಾವಣೆಯಲ್ಲಿ ರೀಡು ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ೮೮೦ ಎಕರೆ ಜಮೀನನ್ನು ಡಿ ನೋಟಿಫಿಕೇಷನ್ ಮಾಡಿರುವುದು ಕಳಂಕವಲ್ಲವೇ? ರೀಡು ಪಿತಾಮಹ ಯಾರೆಂದು ಹೇಳಬಲ್ಲಿರಾ? ಅರ್ಕಾವತಿ ಪ್ರಕರಣದಲ್ಲಿ ನೀವೇ ನೇಮಕ ಮಾಡಿದ್ದ ಕೆಂಪಣ್ಣ ಆಯೋಗ ರೀಡು ಡಿ ನೋಟಿಫಿಕೇಷನ್ ಸಂಬಂಧಿಸಿದಂತೆ ವರದಿ ನೀಡಿದ್ದು, ತಾವು ಪ್ರಕರಣದ ಬಗ್ಗೆ ಸದನದ ಮುಂದೆ ಮಂಡಿಸಿ ಅಕ್ರಮ ನಡೆದಿರುವ ಬಗ್ಗೆ ಕ್ರಮ ಯಾಕೆ ತೆಗೆದುಕೊಂಡಿಲ್ಲ? ತಾವು ಪ್ರಾಮಾಣಿಕರಲ್ಲವೇ. ಈ ಬಗ್ಗೆ ಯಾವಾಗ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ತಾನು ಸಿಕ್ಕಿಕೊಳ್ಳುತ್ತೇನೆಂದು ಭ್ರಷ್ಟಾಚಾರಿಗೆ ಅನ್ನಿಸಿದಾಗ ಭಯಗೊಳ್ಳುತ್ತಾನೆ. ಭಾವನಾತ್ಮಕ ರಕ್ಷಣೆಯನ್ನು ಜಾತಿ ಹೆಸರಿನಲ್ಲಿ ಪಡೆಯುವ ಪ್ರಯತ್ನ ಮಾಡುತ್ತಾನೆ. ಈಗ ತಾವು ಕೂಡ ಅಂತಹದ್ದೇ ಪ್ರಯತ್ನದಲ್ಲಿ ತೊಡಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ನಾನು ಪ್ರತಿಯೊಂದು ದಾಖಲೆಗಳನ್ನು ಪರಿಶೀಲಿಸಿದ್ದು, ಮುಡಾದಲ್ಲಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರ ದುರುಪಯೋಗ ನಡೆದಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಮುಡ ನಿವೇಶನ ಹಗರಣ, ವಾಲ್ಮಿಕಿ ಅಭಿವೃದ್ಧಿ ನಿಗಮ ಹಗರಣ ಮತ್ತು ರಾಜ್ಯದಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಗಳ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲು ಆಗ್ರಹಿಸುವುದರೊಂದಿಗೆ ಪತ್ರ ಮುಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
Dr. CT Ravi’s open letter to the Chief Minister