ಚಿಕ್ಕಮಗಳೂರು: ಕಡೂರು ತಾಲೂಕು ಬೀರೂರು ಹೋಬಳಿ ಎಮ್ಮೆದೊಡ್ಡಿ ಬೆಳ್ಳಿಗುತ್ತಿ ಗ್ರಾಮದ ಪಾರ್ವತಮ್ಮ ಎಂಬುವರು ಸಾಗವಳಿ ಮಾಡಿದ್ದ ಜಮೀನನ್ನು ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಅತಿಕ್ರಮಿಸುವ ಪ್ರಯತ್ನ ಮಾಡಿದ್ದು, ಜಿಲ್ಲಾಧಿಕಾರಿಗಳು ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪುರಚಂದ್ರು ಆಗ್ರಹಿಸಿದರು.
ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳ್ಳಿಗುತ್ತಿ ಗ್ರಾಮದ ಸರ್ವೆ ಸಂಖ್ಯೆ ೭೦ ರಲ್ಲಿ ೪ ಎಕರೆ ಸರಕಾರಿ ಜಾಗವನ್ನು ಕಳೆದ ೩೫ ವರ್ಷದಿಂದ ಪಾರ್ವತಮ್ಮ ಅವರು ಉಳುಮೆ ಮಾಡಿಕೊಂಡು ಬಂದಿದ್ದು, ಸಕ್ರಮಕ್ಕಾಗಿ ನಮೂನೆ ೫೩ ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ವರ್ಷ ಆ ಜಮೀನಲ್ಲಿ ಆಲೂಗೆಡ್ಡೆ ಬೆಳೆದಿದ್ದರು. ಜು.೧೨ ರಂದು ನಿವೃತ್ತ ಅರಣ್ಯಾಧಿಕಾರಿಯೊಬ್ಬರು ಸಹಚರರೊಂದಿಗೆ ಟ್ರ್ಯಾಕ್ಟರ್ ತಂದು ಆಲೂಗೆಡ್ಡೆ ಬೆಳೆ ನಾಶ ಮಾಡಿದ್ದಾರೆ ಎಂದು ತಿಳಿಸಿದರು.
ಪಾರ್ವತಮ್ಮ ಕೇಳಲು ಹೋದಾದ ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ನಿವೃತ್ತ ಅರಣ್ಯಾಧಿಕಾರಿಯ ಮಾತನ್ನು ಗ್ರಾಮಸ್ಥರು ಕೇಳಿ ಡೈರಿಗೆ ಪಾರ್ವತಮ್ಮ ಹಾಕುತ್ತಿದ್ದ ಹಾಲನ್ನು ನಿರಾಕರಿಸುವ ಮೂಲಕ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಜಮೀನಿನ ಬಳಿ ಪಾರ್ವತ್ಮನವರ ಕುಟುಂಬದ ಸದಸ್ಯರು ತೆರಳಿದ್ದ ವೇಳೆ ಅಧಿಕಾರಿಯ ಮಕ್ಕಳು ಮತ್ತು ಇತರರು ಹಲ್ಲೆ ಮಾಡಿದ್ದಾರೆ ಎಂದು ದೂರಿದರು.
ಈ ಬಗ್ಗೆ ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಅವರು ಈ ಬಗ್ಗೆ ಏನೂ ಕ್ರಮ ಕೈಗೊಳ್ಳದೆ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಪತಿ, ಮಕ್ಕಳನ್ನು ಕಳೆದುಕೊಂಡು ಒಂಟಿ ಮಹಿಳೆಯಾಗಿರುವ ಪಾರ್ವತಮ್ಮ ಅವರು ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನನ್ನು ಅವರಿಗೆ ನಮೂನೆ ೫೩ ರಡಿಯಲ್ಲಿ ಮಂಜೂರು ಮಾಡಿಸಿಕೊಂಡಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಿದ್ದೇವೆ. ಅವರಿಗೆ ರಕ್ಷಣೆ ನೀಡುವಂತೆ ಕೋರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ನೀಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ಥೆ ಪಾರ್ವತಮ್ಮ, ಡಿಎಸ್ಎಸ್ ಮುಖಂಡರಾದ ಪುಟ್ಟಸ್ವಾಮಿ, ಅಶೋಕ್, ಸ್ಪಂದನಾ ಮತ್ತಿತರರಿದ್ದರು.
Cultivation encroachment attempt by retired forester