ಚಿಕ್ಕಮಗಳೂರು: ಪ್ರಾಥಮಿಕ ಶಾಲಾ ಶಿಕ್ಷಕರು ತಮ್ಮ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸಿ ಮುಖ್ಯಮಂತ್ರಿಗಳು ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಇತ್ಯರ್ಥಪಡಿಸಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಶಿಕ್ಷಕ ಸಮೂಹಕ್ಕೆ ಭರವಸೆ ನೀಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕಿರಣ್ ಕುಮಾರ್ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರದ ಗಮನ ಸೆಳೆಯಲು ಕೋರಿ ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಶಾಸಕರು ಮಾತನಾಡಿದರು.
ಶಿಕ್ಷಣ ಸಚಿವರು ಆಗಿರುವ ಮಧು ಬಂಗಾರಪ್ಪನವರೊಂದಿಗೆ ಖಾಸಗಿಯಾಗಿ ಭೇಟಿಮಾಡಿ ೨೦೧೬ ಕ್ಕಿಂತ ಮುಂಚೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಆದವರಿಗೆ ಅನ್ಯಾಯವಾಗದಂತೆ ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ತರಲು ಒತ್ತಡ ತರುವುದರ ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿಯೂ ಚರ್ಚಿಸುವುದಾಗಿ ಭರವಸೆ ನೀಡಿದರು.
೧೫ ದಿನಗಳ ಮುಂಚೆ ಈ ಮನವಿ ನೀಡಿದ್ದರೆ ಸದನದಲ್ಲಿ ನಿಮ್ಮ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿ ವಿಷಯ ಪ್ರಸ್ತಾಪಿಸುತ್ತಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶಾಸಕರು, ಶಿಕ್ಷಕರು ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಾಗಿ ತಮ್ಮ ಸಮಸ್ಯೆಗೆ ಸ್ಪಂದಿಸಲು ಆಗಮಿಸಿರುವ ಶಿಕ್ಷಕ ಬಂಧುಗಳನ್ನು ಅಭಿನಂದಿಸಿದರು.
ಕಳೆದ ೨೦೧೭ ನೇ ಸಾಲಿನವರೆಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ೧ ರಿಂದ ೭ ಕ್ಕೆ ನೇಮಕವಾದ ಶಿಕ್ಷಕರು ಎಂದು ಪರಿಗಣಿಸಿ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು ೨೦೧೭ ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಪದವಿ ಪೂರೈಸಿರುವ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರು ಎಂದು ಪರಿಗಣಿಸುವಂತೆ ಶಿಕ್ಷಕರ ಸಂಘ ನೀಡಿದ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಕಿರಣ್ಕುಮಾರ್, ಪ್ರಧಾನ ಕಾರ್ಯದರ್ಶಿ ಅಜ್ಜಯ್ಯ, ಉಪಾಧ್ಯಕ್ಷೆ ಮೋಹನಾಕ್ಷಿ, ಶ್ರೀಧರ್, ಗುರುಮೂರ್ತಿ, ರವಿಕುಮಾರ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.
Full support for primary school teachers’ struggle